ಮಂಗಳೂರು, ಮೇ.12:ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ (ಎಂಸಿಎಫ್) ಉತ್ಪಾದನೆ ಸ್ಥಗಿತಗೊಳಿಸಿದೆ. ನೀರಿನ ಅಭಾವದ ಹಿನ್ನಲೆಯಲ್ಲಿ ಎಂಸಿಎಫ್‌ಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು. ನೀರಿಲ್ಲದ ಕಾರಣ ಉತ್ಪಾದನೆ ಸ್ಥಗಿತಗೊಂಡಿದೆ. ಪ್ರತಿದಿನ ಎಂಸಿಎಫ್‌ನಲ್ಲಿ 1200 ಟನ್ ಯೂರಿಯಾ ಉತ್ಪಾದನೆ ಮಾಡಲಾಗುತ್ತಿತ್ತು. ಪ್ರತಿ ತಿಂಗಳು 10.80 ಕೋಟಿ ಟನ್ ಉತ್ಪಾದನೆ ನಡೆಯುತ್ತಿತ್ತು. ಆದರೆ, ಕಳೆದ ಶನಿವಾರದಿಂದ ಯೂರಿಯಾ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಾಮನಾಥ ರೈ ಅಧ್ಯಕ್ಷತೆಯಲ್ಲಿ ಏಪ್ರಿಲ್ 19ರಂದು ನಡೆದ ಸಭೆಯಲ್ಲಿ ಕೈಗಾರಿಕೆಗಳಿಗೆ ಶೇ .50 ರಷ್ಟು ನೀರು ಸರಬರಾಜು ಕಡಿತಗೊಳಿಸಲು ತೀರ್ಮಾನಿಸಲಾಗಿತ್ತು. ಬಳಿಕ ಎಂಸಿಎಫ್ ನಲ್ಲಿ ಯೂರಿಯಾ ಉತ್ಪಾದನೆ ಶೇ .65ಕ್ಕೆ ಇಳಿದಿತ್ತು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಗ್ರೂಪ್‌ನ ಯುನೈಟೆಡ್ ಬಿಯರ್ ತಯಾರಿಕಾ ಘಟಕ ಶೇ. 50ರಷ್ಟು ಉತ್ಪಾದನೆ ನಿಲ್ಲಿಸಿದೆ.
ಎಂಸಿಎಫ್ ಬಾಗಿಲು ಮುಚ್ಚಿರುವುದರಿಂದ ಸಕಾಲದಲ್ಲಿ ಬಿತ್ತನೆಗೆ ಕೃಷಿಕರಿಗೆ ಗೊಬ್ಬರ ಸಿಗದಿರುವ ಆತಂಕ ಎದುರಾಗಿದೆ. ಮಾರುಕಟ್ಟೆಯಲ್ಲಿ ಯೂರಿಯಾ ಕೊರತೆ ಉಂಟಾಗಿ, ರೈತರಿಗೆ ಬೆಲೆ ಏರಿಕೆಯ ಬಿಸಿ ತಟ್ಟಬಹುದು ಎಂದು ಅಂದಾಜಿಸಲಾಗಿದೆ.