ಅಂಕೋಲಾ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) 2015ನೇ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಕರ್ನಾಟಕದ ಗ್ರಾಮೀಣ ಪ್ರತಿಭೆ ಪ್ರಮೋದ್ ನಾಯಕ್ 779ನೇ ರ್ಯಾಂಕ್ ಗಳಿಸಿದ್ದಾರೆ.
ಪರಿಶ್ರಮ, ಸರಿಯಾದ ತರಬೇತಿ, ಸ್ನೇಹಿತ ಸಹಕಾರ ಮತ್ತು ಕುಟುಂಬದ ನೆರವಿನಿಂದ ನಾನು ಈ ರ್ಯಾಂಕ್ ಪಡೆಯಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರಮೋದ್ ನಾಯಕ್. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ರಮೇಶ್ ನಾಯ್ಕ್ ಮತ್ತು ಶಿಕ್ಷಕಿ ಲಕ್ಷ್ಮೀ ನಾಯಕ್ ಅವರ ಪುತ್ರ. ತಂದೆ ಕೆಲಸದಿಂದ ನಿವೃತ್ತಿ ಹೊಂದಿದ್ದು, ತಾಯಿ ಇನ್ನು ಸೇವೆಯಲ್ಲಿದ್ದಾರೆ. ಪ್ರಮೋದ್ ನಾಯಕ್ ಅವರಿಗೆ ಓರ್ವ ತಂಗಿ ಇದ್ದಾಳೆ.
ಎಸ್ಎಸ್ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಪ್ರಮೋದ್ ನಾಯಕ್ ಉತ್ತರ ಕನ್ನಡ ಜಿಲ್ಲೆಯ ಯುವಕರ ಸಾಧನೆಯಿಂದ ಸ್ಫೂರ್ತಿಗೊಂಡಿದ್ದೆ ಎಂದು ಹೇಳುತ್ತಾರೆ. ಅಂಕೋಲಾದಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನಲ್ಲಿ ಬಿಇ ಪದವಿ ಪಡೆದೆ. ತದ ನಂತರ ಖಾಸಗಿ ಕಂಪನಿಯೊಂದರಲ್ಲಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿ, ಯುಪಿಎಸ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಕೆಲಸಕ್ಕೆ ರಾಜಿನಾಮೆ ನೀಡಿದೆ. ಒಂದು ವರ್ಷಗಳ ಕಾಲ ದೆಹಲಿಯಲ್ಲಿ ತರಬೇತಿ ಪಡೆದೆ. ಎರಡು ಬಾರಿ ಪರೀಕ್ಷೆ ಬರೆದಿದ್ದೆ. ಆದರೆ, ಅದು ವಿಫಲವಾಗಿತ್ತು. ಮೂರನೇ ಬಾರಿಗೆ ನನ್ನ ಪ್ರಯತ್ನ ಸಫಲವಾಗಿದೆ ಎಂದು ಪ್ರಮೋದ್ ಹೇಳಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರಿಂದ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿದ್ದೆ. ಸ್ನೇಹಿತರೊಂದಿಗೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ನನ್ನ ಮಗ ಚಿಕ್ಕನಿಂದಲೂ ವ್ಯಾಸಂಗದಲ್ಲಿ ಮುಂದಿದ್ದನು. ಅವನು ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಆಸೆ ಹೊಂದಿದ್ದೆ ಎಂದು ಪ್ರಮೋದ್ ತಂದೆ ರಮೇಶ್ ತಿಳಿಸಿದ್ದಾರೆ.