ಕೋಲ್ಕತ್ತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ವಿರಾಟ್ ಕೊಹ್ಲಿ-ಎಬಿಡಿ ವಿಲಿಯರ್ಸ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯಲ್ಲಿ ಹಾಲಿವುಡ್ ನ ಸೂಪರ್ ಹೀರೋಗಳಾದ ಬ್ಯಾಟ್‌ಮ್ಯಾನ್-ಸೂಪರ್‌ಮ್ಯಾನ್ ರೀತಿ ವಿಭೃಂಬಿಸುತ್ತಿದ್ದಾರೆ ಎಂದು ಆರ್ಸಿಬಿ ಸಹ ಆಟಗಾರ ಕ್ರಿಸ್ ಗೇಯ್ಲ್ ಹೇಳಿದ್ದಾರೆ.
ನಿನ್ನೆ ಈಡನ್ ಗಾರ್ಡನ್ ನಲ್ಲಿ ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಮನಮೋಹಕ ಇನ್ನಿಂಗ್ಸ್ ಮೂಲಕ ಐಪಿಎಲ್-9 ತನ್ನ 12ನೇ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ 9 ವಿಕೆಟ್ ಗಳ ಆಘಾತಕಾರಿ ಸೋಲುಣಿಸಿತ್ತು. ಈ ಇಬ್ಬರು ಆಟಗಾರರು 67 ಎಸೆತಗಳಲ್ಲಿ 115 ರನ್ ಗಳನ್ನು ಸಿಡಿಸಿದ್ದರು.
ಪಂದ್ಯ ಮುಗಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಕ್ರಿಸ್ ಗೇಯ್ಲ್ ಐಪಿಎಲ್ 9ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಸೂಪರ್ ಹೀರೋಗಳಾಗಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯ ರನ್ ವೇಗಕ್ಕೆ ತಡೆಗೋಡೆ ಇಲ್ಲದಂತಾಗಿದೆ. ಪ್ರತಿಯೊಂದು ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಮೂಲಕ ಆರ್ಸಿಬಿ ಗೆಲುವಿಗೆ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದರು.
ಐಪಿಎಲ್ 9ನೇ ಆವೃತ್ತಿಯಲ್ಲಿ 12 ಪಂದ್ಯಗಳಲ್ಲಿ ಆರ್ಸಿಬಿ ತಂಡ 1349 ರನ್ ಗಳಿಸಿದೆ. ಇದರಲ್ಲಿ ಇಬ್ಬರು ಆಟಗಾರರ ಕೊಡುಗೆ ಹೆಚ್ಚಿದೆ. ಈ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಸಿಡಿಸಿ ಅಗ್ರಮಾನ್ಯ ಆಟಗಾರರಾಗಿದ್ದಾರೆ ಎಂದು ಗೇಯ್ಲ್ ತಂಡದ ಸಹ ಆಟಗಾರರನ್ನು ಹೊಗಳಿದ್ದಾರೆ.