ಮುಂಬೈ: ಬಾಲಿವುಡ್ ನಟ-ನಟಿಯರು ಬೃಹತ್ ನಗರದ ಬೀದಿಗಳಲ್ಲಿ ಪಿಯಾನೋ ಹಿಡಿದು, ಹಾಡು ಹೇಳುತ್ತಾ ಭಿಕ್ಷೆ ಬೇಡಿದರೆ ಹೇಗಿರುತ್ತೆ? ಊಹಿಸಿಕೊಳ್ಳಲಿಕ್ಕೂ ಕಷ್ಟ ಅಲ್ಲವೇ?
ಆದರೆ ಈ ಘಟನೆ ಕೇಳಿಸಿಕೊಂಡ್ರೆ ಕ್ಷಣಕಾಲ ಬೆಚ್ಚಿ ಬೆರಗಾಗಿಬಿಡುತ್ತೀರಾ. ಯಾಕೆಂದರೆ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಗಾಯಕ ಸೋನು ನಿಗಮ್ ಮುಂಬೈನ ಬೀದಿಗಿಳಿದು ಭಿಕ್ಷೆ ಬೇಡಿದ್ದಾರೆ. ಆದರೆ ಮುಂಬೈ ಮಂದಿಗೆ ಭಿಕ್ಷೆ ಬೇಡುತ್ತಿರುವ ವ್ಯಕ್ತಿ ಸೋನು ನಿಗಮ್ ಅನ್ನೋದೇ ಗೊತ್ತಾಗಲಿಲ್ಲ!
ಸಾಮಾನ್ಯವಾಗಿ ಬಾಲಿವುಡ್ನ ಸ್ಟಾರ್ಗಳು ಬೀದಿಗಿಳಿದರೆ ಸಾಕು ಸೆಲ್ಪೀ, ಆಟೋಗ್ರಾಫ್ ಎಂದು ಮುಗಿಬೀಳುವುದನ್ನು ಕಾಣುತ್ತೇವೆ. ಆದರೆ ಸೋನು ಅವತಾರ ಯಾರೊಬ್ಬರಿಗೂ ಪರಿಚಯಿಸಲಿಕ್ಕೆ ಸಾಧ್ಯವಾಗಲಿಲ್ಲ. ಅಷ್ಟರ ಮಟ್ಟಿಗೆ ಸೋನು ವೇಷ ಬದಲಾಯಿಸಿಕೊಂಡಿದ್ದರು. ಕುರುಚಲು ಗಡ್ಡ, ಕಪ್ಪು ಕನ್ನಡಕ, ಹಳೆ ಹರಕಲು ಅಂಗಿ-ಪ್ಯಾಂಟು ಧರಿಸಿದ ಸೋನು ಸಾವಿರಾರು ಮಂದಿಯ ಕಣ್ಣಮುಂದೆಯೇ ಭಿಕ್ಷೆ ಬೇಡಿದರೂ ಯಾರೂ ಅವರನ್ನು ಪರಿಚಯಿಸಲೇ ಇಲ್ಲ. ತಮ್ಮ ನೈಜ ಧ್ವನಿಯಲ್ಲಿ ಮಾತನಾಡಿದರೂ, ಜೋರಾಗಿ ಹಾಡು ಹೇಳಿದರೂ ಧ್ವನಿ ಗೊತ್ತು ಮಾಡಲಿಲ್ಲ.
ಸೋನು ಭಿಕ್ಷೆ ಬೇಡಿದ್ದೇಕೆ?
ಖಾಸಗಿ ಯುಟ್ಯೂಬ್ ಚಾನಲ್ ಏರ್ಪಡಿಸಿದ್ದ ‘ಬೀಯಿಂಗ್ ಇಂಡಿಯನ್’ ಸಾಮಾಜಿಕ ಕಾರ್ಯಕ್ರಮದಲ್ಲಿ ಈ ಖ್ಯಾತ ಗಾಯಕ ಸ್ಪರ್ಧಿಸಿದ್ದರು. ಕಾರ್ಯಕ್ರಮಕ್ಕಾಗಿ ಭಿಕ್ಷುಕನ ವೇಷ ಧರಿಸಿ ಮುಂಬೈನ ಬೀದಿಗಳಲ್ಲಿ ಅಮ್ಮಾ-ತಾಯಿ ಎಂದು ಭಿಕ್ಷೆ ಬೇಡಿದ್ದಾರೆ. ಹೀಗೆ ನಗರ ಸುತ್ತಿ ದಣಿವಾದ ಸೋನು ಮರದ ಕೆಳಗೆ ಕುಳಿತು ಕಲ್ ಹೋ ನಹೊ ಚಿತ್ರದ ಹರ್ ಘಡಿ ಬಾದಲ್ ರಹಿ ಹೇ ರೂಪ್ ಜಿಂದಗಿ ಎಂದು ಹಾಡಲು ಶುರು ಮಾಡಿದ್ದೇ ತಡ ಭಿಕ್ಷುಕನ ಸುತ್ತ ಜನರ ಗುಂಪು ಆವರಿಸಿದೆ. ಕೆಲವರು ತಮ್ಮ ಮೊಬೈಲ್ ಪೋನ್ನಲ್ಲಿ ಹಾಡನ್ನು ರೆರ್ಕಾರ್ಡ್ ಮಾಡಿಕೊಂಡರೆ, ಇನ್ನು ಕೆಲವರು ತಟ್ಟೆಗೆ ಹಣ ಹಾಕಿ ಚಪ್ಪಾಳೆ ತಟ್ಟಿದ್ದಾರೆ. ನಂತರ ಒಬ್ಬ ಬಾಲಕ ಭಿಕ್ಷುಕನ ಕೈಗೆ ಹನ್ನೆರಡು ರೂಪಾಯಿ ನೀಡಿ ಏನಾದರು ತಿನ್ನು ಎಂದಿದ್ದಾನೆ.
ಇಷ್ಟೆಲ್ಲಾ ನಡೆದ ಬಳಿಕ ಸೋನು ತಮ್ಮ ನಟನೆಯ ಬಗ್ಗೆ ತಾವೇ ಅಚ್ಚರಿ, ಭಾವುಕರಾಗಿದ್ದನ್ನು, ಆನಂದಭಾಷ್ಪ ಕಣ್ಣುಗಳನ್ನು ಆವರಿಸಿಕೊಂಡಿತ್ತು ಎಂದೆಲ್ಲಾ ಹೇಳಿಕೊಂಡಿರುವ ಸೋನು ತಮ್ಮ ಧ್ವನಿಯನ್ನು ಯಾರೂ ಗುರುತಿಸಲಿಲ್ಲವಲ್ಲ ಎಂದು ಬೇಸರಗೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
Comments are closed.