ಮಂಗಳೂರು,ಮೇ.23 : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಸೇವಾ ಸಂಸ್ಥೆಯ ಅಶ್ರಯದಲ್ಲಿ ರವಿವಾರ ಬೆಳಿಗ್ಗೆ ನಗರದ ಪುರಭವನದ ಮಂಗಳೂರಿನ ಪುರಭವನದ ಕಲ್ಲಾಡಿ ವಿಠಲ ಶೆಟ್ಟಿ ವೇದಿಕೆಯಲ್ಲಿ ಉದ್ಘಾಟನೆಗೊಂಡ ‘ಯಕ್ಷಧ್ರುವ ಪಟ್ಲ ಸಂಭ್ರಮ’ ವೈವಿಧ್ಯಮಯ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ರವಿವಾರ ಸಂಜೆ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ನೇತ್ರತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ತೆಂಕುತಿಟ್ಟಿನ ಪ್ರಖ್ಯಾತ ಕಲಾವಿದರಾದ ಶ್ರೀ ಪೆರುವಾಯಿ ನಾರಾಯಣ ಶೆಟ್ಟರಿಗೆ 2016ನೇ ಸಾಲಿನ ಪಟ್ಲ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು, ಖ್ಯಾತ ಅರ್ಥಧಾರಿಗಳಾದ ಶ್ರೀ ಜಬ್ಬಾರ್ ಸಮೋ ಸಂಪಾಜೆ ಇವರಿಗೆ ಯಕ್ಷ ಗೌರವ ಮನ್ನಣೆ ನೀಡಿ ಗೌರವಿಸಲಾಯಿತು.
ತೆಂಕು-ಬಡಗುತಿಟ್ಟಿನ 15 ಅಶಕ್ತ ಕಲಾವಿದರಿಗೆ ತಲಾ 50 ಸಾವಿರ ರೂ. ಗಳ ಗೌರವ ಧನ ಸಹಾಯ ವಿತರಿಸಲಾಯಿತು, ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಮೇಲ್ಪಟ್ಟು ಗರಿಷ್ಠ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಿಗೆ ಅಪಘಾತ ವಿಮಾ ಯೋಜನೆಗೆ ಚಾಲನೆ ನೀಡಲಾಯಿತು.
ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಓಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಕಟೀಲಿನ ಅನುವಂಶೀಯ ಮೊಕ್ತೇಸರರಾದ ವೇದಮೂರ್ತಿ ಶ್ರೀ ವಾಸುದೇವ ಅಶ್ರಣ್ಣ ಹಾಗೂ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಆನಂತಪದ್ಮನಾಭ ಅಸ್ರಣ್ಣರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಚಿವರಾದ ಅಭಯಚಂದ್ರ ಜೈನ್, ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್, ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಬಿ.ನಾಗಾರಾಜ್ ಶೆಟ್ಟಿ, ಮೂಡದ ಮಾಜಿ ಅಧ್ಯಕ್ಷ ಹಾಗೂ ಯಕ್ಷ ಕಲಾಪೋಷಕ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕುಂಬ್ಳೆ ಸುಂದರ್ ರಾವ್ ಮುಂತಾದವರು ಆತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಾದ ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಪಾಲ್ಗೊಂಡಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಟ್ರಷ್ಠಿಗಳು ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರುಷೋತ್ತಮ್ ಭಂಡಾರಿ ಅಡ್ಯಾರು ಹಾಗೂ ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಂದಿಸಿದರು.
ಯಕ್ಷಗಾನ ಬಯಲಾಟ :
ಸಭಾ ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ 7.30ರಿಂದ ಹೊಸನಗರ ಮೇಳದ ಕಲಾವಿದರಿಂದ ಮಾನಿಷಾದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪಟ್ಲ ಸತೀಶ್ ಶೆಟ್ಟಿ…
ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಗಂಧರ್ವ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಇಂದು ಅಪಾರ ಸಂಖ್ಯೆಯ ಸದಸ್ಯರನ್ನು ಹೊಂದಿದೆ. ಪಟ್ಲ ಸತೀಶ್ ಶೆಟ್ಟಿ ಅವರು ತೆಂಕುತಿಟ್ಟಿನ ಯಕ್ಷಗಾನ ಇತಿಹಾಸದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದವರು. ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಯುವಜನತೆಯನ್ನು ತಂಡೋಪತಂಡವಾಗಿ ಸೆಳೆದವರು. ಹಸಿದು ಬಂದವರಿಗೆ ಅನ್ನವೀಯುವ ಹೃದಯವಂತನಾಗಿ, ಸ್ನೇಹಕ್ಕೆ ಹಂಬಲಿಸಿದವರಿಗೆ ಆಪ್ತ ಮಿತ್ರನಾಗಿ, ಸಹಾಯ ಬೇಡಿ ಬಂದವರಿಗೆ ಆಪ್ತ ರಕ್ಷಕನಾಗಿ, ಹಲವರಿಗೆ ಹಲವು ರೂಪದಲ್ಲಿ ಕಾಣ ಸಿಗುವ ಇವರ ವ್ಯಕ್ತಿತ್ವ ಒಂದು ಅನನ್ಯವಾದುದು.
Comments are closed.