ಮುಂಬೈ: ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿರುವ ಮರಾಠಿ ಸಿನೆಮಾ ‘ಸೈರಾಟ್’ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವುದು ವಿಶೇಷ!
ನಾಗರಾಜ್ ಮಂಜುಳೆ ಅವರ ರೋಮ್ಯಾಂಟಿಕ್ ಚಿತ್ರ ಬಿಡುಗಡೆಯಾದ ಮೂರು ವಾರಗಳಲ್ಲಿ ೬೫ ಕೋಟಿ ಗಳಿಕೆ ಕಂಡಿದೆ. ಸುಮಾರು ೪ ಕೋಟಿ ಖರ್ಚಿನಲ್ಲಿ ಸಿದ್ಧವಾಗಿರುವ ಈ ಸಿನೆಮಾ ಮರಾಠಿ ಚಿತ್ರರಂಗದಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿರುವುದಲ್ಲದೆ, ಬಾಲಿವುಡ್ ಸಿನೆಮಾರಂಗಕ್ಕೂ ಶಾಕ್ ನೀಡಿದೆ.
ಯಾವುದೇ ದೊಡ್ಡ ಮಟ್ಟದ ಸ್ಟಾರ್ ನಟರಿಲ್ಲದೆ ಇದನ್ನು ಸಾಧ್ಯವಾಗಿಸಿರುವುದು ನಿರ್ದೇಶಕ ನಾಗರಾಜ್ ಅವರ ವಿಶೇಷ. ಜಾತಿ ವೈಷಮ್ಯದ ನಡುವೆ ಪ್ರೀತಿಯ ಕಥೆ ಕಟ್ಟಿಕೊಟ್ಟಿರುವ ‘ಸೈರಾಟ್’ ಮಹಾರಾಷ್ಟದ ಹೊರಗೂ ಭರದ ಪ್ರದರ್ಶನ ಕಾಣುತ್ತಿದೆ.
ಹೊಸಬರಾದ ರಿಂಕು ರಾಜಗುರು ಮತ್ತು ಆಕಾಶ್ ತೋಶರ್ ಸಿನೆಮಾದ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತಿಚೆಗಷ್ಟೇ ಅಪಾರ ಲಾಭ ಗಳಿಸಿದ್ದಕ್ಕಾಗಿ ಸಿನೆಮಾದ ನಿರ್ಮಾಪಕರು ಈ ನಟರಿಗೆ ಹೆಚ್ಚುವರಿ ೫ ಕೋಟಿ ಸಂಭಾವನೆ ನೀಡುವುದಾಗಿ ಘೋಷಿಸಿದ್ದರು.
ನಾನಾ ಪಾಟೇಕರ್ ನಟನೆಯ ‘ನಟಸಾಮ್ರಾಟ್’ ನಂತರ ಮರಾಠಿ ಚಿತ್ರರಂಗಕ್ಕೆ ಇದು ಎರಡನೆ ಬ್ಲಾಕ್ ಬಸ್ಟರ್ ಸಿನೆಮಾ. ‘ನಟಸಾಮ್ರಾಟ್’ ಕೂಡ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದು ಬಾಕ್ಸ್ ಆಫೀಸ್ ನಲ್ಲಿ ೪೮ ಕೋಟಿ ಗಳಿಸಿತ್ತು.
Comments are closed.