ಬೆಂಗಳೂರು: ಹಿರಿಯ ನಟ ಶಿವರಾಜ್ ಕುಮಾರ್ ಜೊತೆ ನಟಿಸುತ್ತಿರುವ ವಿಷಯವನ್ನು ನಟ ಶ್ರೀಮುರಳಿ ಫೇಸ್ಭುಕ್ ನಲ್ಲಿ ಘೋಷಿಸಿದ್ದಾರೆ. ಚೊಚ್ಚಲ ನಿರ್ದೇಶಕ ನರ್ತನ್ ಈ ಸಿನೆಮಾ ನಿರ್ದೇಶಿಸುತ್ತಿದ್ದು, ಮುರಳಿಗೆ ‘ರಥಾವರ’ ನಂತರದ ಸಿನೆಮಾ ಇದು.
“ಇದಕ್ಕಿಂತಲೂ ಹೆಚ್ಚಿನ ಭಾಗ್ಯ ನಿರೀಕ್ಷಿಸಲಾರೆ. ನಾನು ಬಹಳ ಸಂತಸಗೊಂಡಿದ್ದೇನೆ. ಹೌದು ನಮ್ಮ ಶಿವಣ್ಣ (ನನ್ನ ಮಾಮ) ಜೊತೆಗೆ ಸಿನೆಮಾ ಮಾಡಲಿದ್ದೇನೆ. ಶೀರ್ಷಿಕೆ ಶೀಘ್ರದಲ್ಲೇ ಘೋಷಿಸಲಾಗುತ್ತದೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು. ನಿಮ್ಮ ಶ್ರೀಮುರಳಿ. ಜೈ ಹಿಂದ್. ಜೈ ಭುವನೇಶ್ವರಿ” ಎಂದು ಫೇಸ್ಬುಕ್ ನಲ್ಲಿ ಮುರಳಿ ಬರೆದಿದ್ದಾರೆ.
“ನಾವು ಕಳೆದ ವಾರ ಅವರಲ್ಲಿಗೆ (ಶಿವರಾಜ್ ಕುಮಾರ್) ತೆರಳಿ ಕಥೆ ಹೇಳಿದೆ. ಅದನ್ನು ಇಷ್ಟಪಟ್ಟ ಅವರು ಒಪ್ಪಿಕೊಂಡರು. ನನ್ನ ಜೊತೆಗೆ ಕೆಲಸ ಮಾಡಲು ಶಿವಣ್ಣ ಒಪ್ಪಿಕೊಂಡಿದ್ದು ವರ ಸಿಕ್ಕಂತೆ” ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಶ್ರೀಮುರಳಿ.
ಶಿವರಾಜ್ ಕುಮಾರ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಪಾತ್ರ ಬರೆದಿದ್ದಲ್ಲಂತೆ. ಆದರೆ ನಿರ್ಮಾಪಕರು ಈ ಪಾತ್ರಕ್ಕಾಗಿ ನಟನನ್ನು ಹುಡುಕುವಾಗ ಶಿವರಾಜ್ ಕುಮಾರ್ ಸೂಕ್ತ ಎಂದೆನಿಸಿತು ಎನ್ನುತ್ತಾರೆ ಶ್ರೀಮುರಳಿ.
“ಶಿವಣ್ಣ ಮಾತ್ರ ಈ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ಎಲ್ಲವೂ ಸರಿಯಾಗಿ ನಡೆಯುತ್ತಿದೆ. ನನ್ನ ತಾಳ್ಮೆ ಫಲ ನೀಡಿದೆ. ಚಿತ್ರೀಕರಣ ಪ್ರಾರಂಭಿಸಲು ಸಮಯವಿದು” ಎನ್ನುತ್ತಾರೆ ಮುರಳಿ.
ಜಯಣ್ಣ ಕಂಬೈನ್ಸ್ ನಿರ್ಮಿಸುತ್ತಿರುವ ಈ ಸಿನೆಮಾ ಜೂನ್ ನಿಂದ ಚಿತ್ರೀಕರಣ ಪ್ರಾರಂಭಿಸಲಿದೆ. ಉಳಿದ ತಾರಾಗಣವನ್ನು ಅಂತಿಮಗೊಳಿಸಬೇಕಿದೆ.
Comments are closed.