ಕರ್ನಾಟಕ

ಪೊಲೀಸ್ ಮುಷ್ಕರ – ಸರ್ಕಾರಕ್ಕೆ ಬಿಸಿ ತುಪ್ಪ

Pinterest LinkedIn Tumblr

protestಬೆಂಗಳೂರು, ಮೇ ೨೭- ವೇತನ ಹೆಚ್ಚಳ ಸೇರಿದಂತೆ ಹಲವಾರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂ. 4 ರಂದು ಸಾಮೂಹಿಕ ರಜೆ ಹಾಕಲು ಪೊಲೀಸ್ ಪೇದೆಗಳು ನಿರ್ಧರಿಸಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.

ಪೊಲೀಸರು ಇದೇ ಮೊದಲ ಬಾರಿಗೆ ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಸರ್ಕಾರದ ಧೋರಣೆ ವಿರುದ್ಧ ತಿರುಗಿಬೀಳಲು ಮುಂದಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಪರಮೇಶ್ವರ್ ಅವರಲ್ಲಿ ತಳಮಳ ಉಂಟುಮಾಡಿದೆ.

ಅಗತ್ಯವಸ್ತುಗಳ ಬೆಲೆ ಏರಿಕೆ ಗಗನಮುಖಿಯಾಗಿರುವುದರಿಂದ ತಮಗೆ ದೊರೆಯುತ್ತಿರುವ ಕಡಿಮೆ ವೇತನದಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಜತೆಗೆ ರಜೆಗಳೇ ಇಲ್ಲದೆ ಕುಟುಂಬ ಸದಸ್ಯರಿಗೆ ದೂರವಾಗಿ ಎಷ್ಟೋ ಸಲ ಕೆಲಸ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡಿದರೂ ಹಿರಿಯ ಅಧಿಕಾರಿಗಳ ಕಿರುಕುಳ ತಪ್ಪಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಕಂಡು ಹಿಡಿಯಬೇಕು ಎಂಬುದು ಮುಷ್ಕರ ನಡೆಸಲು ನಿರ್ಧರಿಸಿರುವ ಪೊಲೀಸ್ ಪೇದೆಗಳ ಒತ್ತಾಯವಾಗಿದೆ.

ಜೀವದ ಹಂಗನ್ನು ತೊರೆದು ಹಲವು ಬಾರಿ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಜೀವಕ್ಕೆ ಅಪಾಯ ಒದಗಿರುವ ಸಂದರ್ಭಗಳೂ ಇವೆ. ತೊಂದರೆಗೀಡಾದ ಸಹೋದ್ಯೋಗಿ ಬಂಧುಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ರಕ್ಷಣೆ ಒದಗಿಸುವಲ್ಲಿ ಮೇಲಾಧಿಕಾರಿಗಳು ವಿಫಲವಾಗಿದ್ದಾರೆ. ಸರ್ಕಾರ ಕೂಡ ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಪರಿಸ್ಥಿತಿ ಹೀಗಿರುವಾಗ ಅನಿವಾರ್ಯವಾಗಿ ಸಾಮೂಹಿಕ ರಜೆ ಹಾಕಬೇಕಾಗಿದೆ ಎಂದು ಪೊಲೀಸರು ತಮ್ಮ ಅಂತರಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಮಾಜದ ವಿವಿಧ ವಲಯಗಳಿಂದ ಪೇದೆಗಳ ಬಗ್ಗೆ ಅನುಕಂಪ ಹೆಚ್ಚಾಗುತ್ತಿದೆ. ಈ ನಡುವೆ ಪೇದೆಗಳು ಸಾಮೂಹಿಕ ರಜೆ ಹಾಕಿದರೆ ಅಂತವರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದ್ದರೂ ಅದಕ್ಕೆ ಮಣಿಯದಿರಲು ಪೇದೆಗಳು ತೀರ್ಮಾನಿಸಿರುವಂತಿದೆ.

ಈಗಾಗಲೇ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿನ ಸಿಬ್ಬಂದಿ ಸಾಮೂಹಿಕ ರಜೆಗೆ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ. ಸಹಸ್ರಾರು ಅರ್ಜಿಗಳು ಈಗಾಗಲೇ ಠಾಣಾ ಮೇಲಾಧಿಕಾರಿಗಳ ಕೈಸೇರಿವೆ. ಈ ಪ್ರಕ್ರಿಯೆ ಇನ್ನೂ ತೀವ್ರಗೊಳ್ಳುವ ಪರಿಸ್ಥಿತಿ ಇದ್ದು, ಸರ್ಕಾರ ಈ ಸಮುದಾಯದವರಿಗೆ ಸೂಕ್ತ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.

Comments are closed.