ಬೆಂಗಳೂರು, ಮೇ ೨೭- ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಇದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ರೈತ ಸಮಾವೇಶದಲ್ಲಿ ಒತ್ತಾಯಿಸಲಾಯಿತು.
* ಬರಗಾಲವನ್ನು ರಾಷ್ಟ್ರೀಯ ವಿಪತ್ತಾಗಿ ಘೋಷಿಸಲು ಆಗ್ರಹ.
* 175 ತಾಲ್ಲೂಕುಗಳಲ್ಲಿ ಬರ
* ಬರ ಪರಿಹಾರಕ್ಕೆ 22635 ಕೋಟಿ ಬಿಡುಗಡೆಗೆ ಪಟ್ಟು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ಆಗಮಿಸಿದ್ದರು. ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹಿಂದೆಂದೂ ಕಂಡರಿಯದ ಬರ ಪರಿಸ್ಥಿತಿ ರಾಜ್ಯವನ್ನು ಆವರಿಸಿದೆ.
ರಾಜ್ಯದ ಎಲ್ಲಾ 175 ತಾಲ್ಲೂಕುಗಳಲ್ಲೂ ಬರ ಪರಿಸ್ಥಿತಿ ಇರುವುದರಿಂದ ರಾಜ್ಯ ಸರ್ಕಾರ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಮಾತ್ರವಲ್ಲ, ರಾಜ್ಯ ಸರ್ಕಾರ ಬೆಳೆ ಹಾನಿ ಸಂಬಂಧ ನೀಡಿರುವ ವರದಿಯ ಆಧಾರದಲ್ಲಿ 22,635 ಕೋಟಿ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸಾಲ ಮಾಡಿ ರೈತರು ಬೆಳೆದ ಬೆಳೆ ನೀರಿಲ್ಲದೆ ನಷ್ಟವಾಗಿದೆ. ಆದ್ದರಿಂದ ರೈತರು ರಾಷ್ಟ್ರೀಯ ಬ್ಯಾಂಕುಗಳಿಂದ ಮಾಡಿರುವ ಕೇಂದ್ರ ಸರ್ಕಾರ ಹಾಗೂ ಸಹಕಾರಿ ಬ್ಯಾಂಕುಗಳಿಂದ ಮಾಡಿದ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು. ಈಗಾಗಲೇ ಮಳೆ ಆರಂಭಗೊಂಡಿದ್ದು, ಅದು ಮುಂದುವರೆಯುವ ಲಕ್ಷಣ ಕಂಡುಬರುತ್ತಿದೆ. ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಉಚಿತವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ ಅವರು, ಮಹದಾಯಿ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ದೊಂಬರಾಟ ನಡೆಸುವುದನ್ನು ಬಿಟ್ಟು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ, ಶೇ. 70 ರಷ್ಟು ರೈತರು ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯದ ಕೃಷಿ ಬೆಲೆ ಆಯೋಗ, 17 ಕೃಷಿ ಉತ್ಪನ್ನಗಳ ಪೈಕಿ 16 ಕೃಷಿ ಉತ್ಪನ್ನಗಳು ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಎಂದು ವರದಿ ನೀಡಿದೆ. ಆದ್ದರಿಂದ ಕೃಷಿ ಉತ್ಪನ್ನಗಳಿಗೂ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕು. ರೈತರ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಬೇಕು. ನೀರಾವರಿ ಯೋಜನೆಗಳನ್ನು ಶೀಘ್ರಗತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ರೈತರ ಕಂದಾಯ, ವಿದ್ಯುಚ್ಛಕ್ತಿ ಬಿಲ್ ಬಾಕಿಯನ್ನು ರದ್ದು ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕುಟುಂಬಕ್ಕೂ ನೀಡಬೇಕು. ಹಾಲು, ರೇಷ್ಮೆ, ತೆಂಗು, ತಾಳೆಗೆ ಪರಿಷ್ಕೃತ ಬೆಲೆ ಘೋಷಿಸಬೇಕು. ಕಬ್ಬಿನ ಬಾಕಿಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕಡಿದಾಳ್ ಶಾಮಣ್ಣ, ಬಿ.ಎಂ. ಚಿಕ್ಕಸ್ವಾಮಿ, ಮಹಾತ್ಮ ಗಾಂಧೀಜಿಯವರ ಮೊಮ್ಮಗಳಾದ ತಾರಾ ಗಾಂಧಿ, ಮತ್ತಿತರರು ಇದ್ದರು.
Comments are closed.