ಕರ್ನಾಟಕ

ನೆಹರು ಪುಣ್ಯತಿಥಿ `ಕೈ’ ಮುಖಂಡರು ಗೈರು

Pinterest LinkedIn Tumblr

congressಬೆಂಗಳೂರು, ಮೇ ೨೭- ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂರವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಗೈರುಹಾಜರಿ ಕಂಡು ಬಂತು. ಬೆರಳೆಣಿಕೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ನವ ಭಾರತದ ಶಿಲ್ಪಿ, ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಎಂಬ ಹೊಗಳಿಕೆಗೆ ಪಾತ್ರವಾಗಿರುವ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ನೆಹರುರವರ ಬಗ್ಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಇರುವ ಅನಾಧಾರ ಧೋರಣೆ. ನಿರ್ಲಕ್ಷ್ಯ ಮನೋಭಾವಕ್ಕೆ ಈ ಕಾರ್ಯಕ್ರಮ ಕನ್ನಡ ಹಿಡಿದಂತಿತ್ತು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಲ್. ಶಂಕರ್ ಹಾಜರಿದ್ದ ಎಂಟು ಜನ ಕಾರ್ಯಕರ್ತರ ಜೊತೆ ನೆಹರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿಧಾನ ಪರಿಷತ್ ಚುನಾವಣೆ ಟಿಕೆಟ್ ಗಿಟ್ಟಿಸಲು ದೆಹಲಿ ಯಾತ್ರೆ ಕೈಗೊಂಡಿರುವ ಮುಖಂಡರು ಅವರ ಬೆಂಬಲಿಗ ಕಾರ್ಯಕರ್ತರಿಗೆ ನೆಹರೂ ನೆನಪು ಅಪಥ್ಯ ಎಂಬುದಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗಿಂತ ಮಾಧ್ಯಮದವರ ಸಂಖ್ಯೆಯೇ ಹೆಚ್ಚಾಗಿತ್ತು. ಹಾಜರಿದ್ದ ಬೆರಳೆಣಿಕೆಯ ಕಾರ್ಯಕರ್ತರಿಗೆ ನೆಹರು ಸಾಧನೆಗಳ ಬಗ್ಗೆ ಮನವರಿಕೆ ಮಾಡಿ ಮಾತನಾಡಿದ ಹಿರಿಯ ನಾಯಕ ಬಿ.ಎಲ್. ಶಂಕರ್, ದೇಶದಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಿದ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ದೊಡ್ಡ ನಾಯಕ ಎಂದು ಬಣ್ಣಿಸಿದರು. ಈ ಕಾರ್ಯಕ್ರಮ ಹತ್ತು ನಿಮಿಷದಲ್ಲಿ ಮುಗಿದು ಹೋಯಿತು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಹುಚ್ಚಪ್ಪ, ಮುಖಂಡರಾದ ನಾರಾಯಣಪ್ಪ, ಬೋಸರಾಜ್ ಉಪಸ್ಥಿತರಿದ್ದರು.

Comments are closed.