ಹಿರೋಷಿಮಾ (ಜಪಾನ್): ದ್ವಿತೀಯ ಮಹಾ ಸಮರದ ಕಾಲದಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡ ವಿಶ್ವದ ಪ್ರಪ್ರಥಮ ಪರಮಾಣು ಬಾಂಬ್ ನ್ನು ಎಸೆಯಲಾಗಿದ್ದ ಜಪಾನಿನ ಹಿರೋಷಿಮಾ ನಗರಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭೇಟಿ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ. ಹಿರೋಷಿಮಾ ನಗರಕ್ಕೆ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಅವರು ಮಾತನಾಡಿ, ‘71 ವರ್ಷಗಳ ಹಿಂದೆ ಮೋಡರಹಿತವಾದ ನಿರ್ಮಲವಾದ ಬೆಳಗಿನಲ್ಲಿ ಆಕಾಶದಿಂದ ಮೃತ್ಯು ಬಂದು ಬಿತ್ತು, ಜೊತೆಗೆ ವಿಶ್ವವೇ ಬದಲಾಗಿಹೋಯಿತು. ದಿಢೀರನೆ ಕಂಡು ಬಂದ ಬೆಳಕು ಮತ್ತು ಬೆಂಕಿಯ ಉಂಡೆ ಇಡೀ ನಗರವನ್ನೇ ನಾಶ ಮಾಡಿತು ಮತ್ತು ಸ್ವಯಂ ನಾಶದ ಮಾರ್ಗವನ್ನು ಮನುಷ್ಯ ಇಟ್ಟುಕೊಂಡಿದ್ದಾನೆ ಎಂಬುದನ್ನು ಜಗಜ್ಜಾಹೀರುಗೊಳಿಸಿತು’ ಎಂದು ಅವರು ನುಡಿದರು.
ಘಟನೆಯಲ್ಲಿ ಸಾವನ್ನಪ್ಪಿದ ಎಲ್ಲಾ ಆತ್ಮಗಳಿಗೂ ಶಾಂತಿ ಲಭಿಸಲಿ; ಇಂತಹ ಕೆಡುಕು ಪುನರಾವರ್ತನೆಯಾಗದಿರಲಿ’ ಎಂದು ಬರೆದಿಡಲಾಗಿರುವ ಪರಮಾಣು ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ ಒಬಾಮಾ, ಈ ಹಿರೋಷಿಮಾ ಎಂಬ ಸ್ಥಳಕ್ಕೆ ನಾವು ಏಕೆ ಬಂದಿದ್ದೇವೆ ? ಕೆಲವೇ ಸಮಯದ ಹಿಂದೆ ಇಂತಹ ಭೀಕರ ಬಲಪ್ರಯೋಗವನ್ನೇಕೆ ಮಾಡಲಾಯಿತು ಎಂಬ ಬಗ್ಗೆ ಮರುಪರಿಶೀಲನೆ ಮಾಡಲು ನಾವು ಇಲ್ಲಿಗೆ ಬಂದಿದ್ದೇವೆ. ಮೃತರಿಗಾಗಿ ಶೋಕ ವ್ಯಕ್ತ ಪಡಿಸಲು ಬಂದಿದ್ದೇವೆ ಎಂದು ಹೇಳಿದರು.
ಅಣ್ವಸ್ತ್ರ ಮುಕ್ತ ಜಗತ್ತಿನ ಸೃಷ್ಟಿಗಾಗಿ ಪ್ರಯತ್ನಿಸುವ ಮೂಲಕ ವಿಶ್ವದಲ್ಲಿ ಶಾಂತಿ ಹರಡಲು ವಿಶ್ವದ ಜನತೆ ಒಟ್ಟಾಗುವ ಧೈರ್ಯ ಮಾಡಲಿ ಎಂದು ಹಾರೈಸುವೆ ಎಂದು ಮ್ಯೂಸಿಯಂ ಅತಿಥಿ ಪುಸ್ತಕದಲ್ಲಿ ಒಬಾಮಾ ಬರೆದಿಟ್ಟಿದ್ದಾರೆ.
ಅಂತರಾಷ್ಟ್ರೀಯ
Comments are closed.