ಕುಂದಾಪುರ: ಯುವತಿಯೋರ್ವಳ ಅಶ್ಲೀಲ ವಿಡೀಯೋ ಚಿತ್ರೀಕರಣವನ್ನು ರಹಸ್ಯವಾಗಿ ಮಾಡಿ ಅದನ್ನು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟ ಬಗ್ಗೆ ನೊಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾಳೆ.
(ತಲೆಮರೆಸಿಕೊಂಡ ಸುದರ್ಶನ್ ಶೆಟ್ಟಿ, ಬಂಧಿತ ಆರೋಪಿ ಸಂತೋಷ್ ಪೂಜಾರಿ)
ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಈ ಘಟನೆ ನಡೆದಿದ್ದು ಯುವತಿ ನೀಡಿದ ದೂರಿನನ್ವಯ ಪೊಲೀಸರು ಓರ್ವನನ್ನು ಬಂಧಿಸಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ವಿಡಿಯೋ ಕಳಿಸಿದನೆನ್ನಲಾದ ಬಂಧಿತ ಆರೋಪಿ ಸಂತೋಷ ಪೂಜಾರಿ(24), ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ ಸುದರ್ಶನ್ ಶೆಟ್ಟಿ(30) ಪರಾರಿಯಾದ ಆರೋಪಿ.
ಘಟನೆ ವಿವರ:
ಸುದರ್ಶನ್ ಶೆಟ್ಟಿ ತನ್ನ ಸ್ನೇಹಿತೆಯಾದ ಯುವತಿಯೋರ್ವಳನ್ನು ಮೂರು ವರ್ಷಗಳ ಹಿಂದೆ ಕೊಲ್ಲೂರು ದೇವಸ್ಥಾನಕ್ಕೆಂದು ಕರೆದೊಯ್ದಿದ್ದ. ಮಾರ್ಗಮಧ್ಯೆ ಯುವತಿಗೆ ನೈಸರ್ಗಿಕ ಬದಲಾವಣೆಯಾಗಿದೆ. ಇದರಿಂದ ಇಬ್ಬರು ಕೊಲ್ಲೂರಿನ ಲಾಡ್ಜೊಂದರಲ್ಲಿ ರೂಂ ಪಡೆಯುತ್ತಾರೆ. ಈತ ಹೊರಗಿದ್ದು ಆಕೆ ಒಳಗೆ ಸ್ನಾನ ಮಾಡಿ ಬಟ್ಟೆ ಬದಲಿಸುವ ವೇಳೆ ತನ್ನ ಮೊಬೈಲ್ ಕ್ಯಾಮೆರಾ ಮೂಲಕ ರಹಸ್ಯವಾಗಿ ಚಿತ್ರೀಕರಿಸಿಕೊಂಡಿರುತ್ತಾನೆ. ಬಳಿಕ ಇಬ್ಬರು ಅಲ್ಲಿಂದ ತಮ್ಮತಮ್ಮ ಮನೆಗೆ ತೆರಳಿರುತ್ತಾರೆ. ಈದಾದ ಕೆಲವೇ ದಿನದಲ್ಲು ಸುದರ್ಶನ್ ಶೆಟ್ಟಿ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿ ಅಲ್ಲಿಯೇ ಉಳಿದುಬಿಡುತ್ತಾನೆ. ಇಬ್ಬರಿಗೂ ಅಂತಹ ಮಾತುಕತೆ ಸಂಪರ್ಕವೂ ಹೆಚ್ಚಾಗಿ ಇರುವುದೂ ಇಲ್ಲ. ಸುದೀರ್ಘ ಮೂರು ವರ್ಷದ ಬಳಿಕ ಸುದರ್ಶನ್ ಕಳೆದ ಏಳೆಂಟು ತಿಂಗಳ ಹಿಂದೆ ಊರಿಗೆ ಮರಳಿದ್ದ. ಅಲ್ಲಿನ ತರುವಾಯ ಸುದರ್ಶನನ ಸ್ನೇಹಿತ ಸಂತೋಷ್ ಎಂಬಾತ ಯುವತಿಗೆ ವಿಡಿಯೋ ವಿಚಾರದಲ್ಲಿ ಬ್ಲ್ಯಾಕ್ಮೇಲ್ ಮಾಡುವ ಕೆಲಸ ಮಾಡಿದ್ದು ತನ್ನ ಜೊತೆ ಸುತ್ತಾಡಲು ಬರುವಂತೆ ಪೀಡಿಸುತ್ತಿದ್ದ. ಇಲ್ಲವಾದಲ್ಲಿ ವಿಡಿಯೋ ದೃಶ್ಯಗಳನ್ನು ಎಲ್ಲಾ ವಾಟ್ಸಾಪ್ ನಂಬರುಗಳಿಗೆ ಕಳುಹಿಸುವ ಬೆದರಿಕೆಯನ್ನು ಹಾಕಿದ್ದನೆನ್ನಲಾಗಿದೆ. ಇದ್ಯಾವುದಕ್ಕೂ ಯುವತಿ ಕ್ಯಾರೇ ಅನ್ನದಿದ್ದಾಗ ಈತ ಆ ಅಮಾನವೀಯ ಕೆಲಸ ಮಾಡಿದ್ದನೆನ್ನಲಾಗಿದೆ.
ಸಂತೋಷ್ ಹಾರ್ಡವೇರ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದಿದ್ದ ಎನ್ನಲಾಗಿದೆ. ವಿಡಿಯೋ ವಾಟ್ಸಾಪ್ ಗಳಿಗೆ ಕಳುಹಿಸಿದ ವೇಳೆ ಯುವತಿಯ ಸಹೋದರನಿಗೂ ಈ ವಿಡಿಯೋ ಬಂದಿತ್ತು. ಪರಿಶೀಲನೆ ನಡೆಸಿ ಮನೆಯಲ್ಲಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ತರುವಾಯ ಪೋಷಕರೊಡನೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ ಕದ್ದು ವಿಡಿಯೋ ಚಿತ್ರೀಕರಿಸಿದ ಸುದರ್ಶನ್ ಹಾಗೂ ವಿಡಿಯೋ ರವಾನಿಸಿ ಮಾನಹಾನಿಗೈದ ಸಂತೋಷ್ ಪೂಜಾರಿಯ ವಿರುದ್ಧ ದೂರು ದಾಖಲಿಸಿದ್ದಾಳೆ.
ಯುವತಿ ದೂರಿನಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂತೋಷ್ ಪೂಜಾರಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನಗೆ ವಿಡಿಯೋ ಬಗ್ಗೆ ಗೊಂದಲದ ಹೇಳಿಕೆಯನ್ನು ಈತ ನೀಡುತ್ತಿದ್ದಾನೆನ್ನಲಾಗಿದೆ. ತನಗೆ ವಿಡಿಯೋ ನೀಡಿದ ಬಗ್ಗೆ ಯಾವ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ. ಈ ನಡುವೆಯೇ ಪ್ರಮುಖ ಆರೋಪಿ ಸುದರ್ಶನ್ ಇನ್ನೂ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಬಲೆಬೀಸಲಾಗಿದೆ.
ಸುದರ್ಶನ್ ಬಂಧನದ ಬಳಿಕ ವಿಡಿಯೋ ರವಾನೆ ಕುರಿತ ಇನ್ನಷ್ಟು ಮಹತ್ವದ ಸಂಗತಿಗಳು ಬೆಳಕಿಗೆ ಬರಲಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ.
Comments are closed.