ಬೆಂಗಳೂರು: ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಬೇಕೆಂದುಕೊಂಡಿದ್ದೆ. ಆದರೆ ಪಕ್ಷದ ಅಧ್ಯಕ್ಷರು ಈವರೆಗೂ ಕರೆದು ಮಾತನಾಡಲಿಲ್ಲ. ಹಾಗಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ನೀಡಲು ನಿರ್ಧರಿಸಿದ್ದೇನೆ. ನಾಳೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಮತ ಚಲಾಯಿಸಿ ಮಾತು ಉಳಿಸಿಕೊಳ್ಳುತ್ತೇನೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮ್ಮದ್ಖಾನ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಅಧ್ಯಕ್ಷರು ಈವರೆಗೆ ನಮ್ಮನ್ನು ಕರೆದು ಮಾತನಾಡಲಿಲ್ಲ, ಯಾರಿಗೆ ಮತ ಹಾಕಬೇಕೆಂದು ಸೂಚನೆ ನೀಡಲಿಲ್ಲ.
ಹಾಗಾಗಿ ಇಂದು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದೇನೆ. ನಾಳೆ ನಡೆಯಲಿರುವ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಕೆ.ಸಿ.ರಾಮಮೂರ್ತಿ ಅವರಿಗೆ ಮತ ಹಾಕುತ್ತೇನೆಂದು ಮಾತು ಕೊಟ್ಟಿದ್ದೇನೆ. ಅದರಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ನಿಂದ ಸಿಡಿದೆದ್ದಿರುವ ಜಮೀರ್ ಅಹಮದ್ ಖಾನ್ ಅವರು, ಈ ಹಿಂದೆಯೇ ಬಹಿರಂಗವಾಗಿಯೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ಹೇಳಿಕೆ ನೀಡಿದ್ದರು. ಇಂದೂ ಕೂಡ ಬಹಿರಂಗವಾಗಿಯೇ ಹೇಳಿಕೆ ನೀಡಿದರು.
ಇವರ ಜೊತೆ ಇನ್ನೂ ನಾಲ್ಕು ಜನ ಶಾಸಕರು ಬಂಡಾಯವೆದ್ದಿದ್ದಾರೆ. ಚೆಲುವರಾಯಸ್ವಾಮಿ, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸಮೂರ್ತಿ ಅವರೂ ಕೂಡ ಸಿಡಿದೆದ್ದಿದ್ದಾರೆ. ನಿನ್ನೆ ನಡೆದ ಶಾಸಕಾಂಗ ಸಭೆಗೆ ನಾಲ್ವರು ಶಾಸಕರು ಗೈರಾಗಿದ್ದರು. ಸಭೆಗೆ ಹಾಜರಾಗಿದ್ದ ಎಸ್.ಸಿ.ಬಾಲಕೃಷ್ಣ ಅವರು ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದ್ದರು.
Comments are closed.