ಕರ್ನಾಟಕ

ಸೆಂಟ್ರಲ್‌ ಕಾಲೇಜು: ಗದ್ದಲದಿಂದ ಅಸಹನೀಯ ಸ್ಥಿತಿ: ಸಮಸ್ಯೆಗೆ ಮೆಟ್ರೊ ನಿಗಮ ಕಾರಣ: ವಿ.ವಿ. ಆರೋಪ

Pinterest LinkedIn Tumblr

pvec10june16aCentral-1ಬೆಂಗಳೂರು: ವರ್ಷಗಳಿಂದ ಡಾಂಬರು ಕಾಣದೆ ಹದಗೆಟ್ಟ ರಸ್ತೆ, ಕರ್ಕಶ ಹಾರ್ನ್‌ ಮಾಡುತ್ತಾ ನುಗ್ಗುವ ನೂರಾರು ದ್ವಿಚಕ್ರ ವಾಹನಗಳು, ಕಿತ್ತು ಹೋದ ಕಾಲೇಜಿನ ತಡೆಗೋಡೆ. ಇದು ನಗರದ ಸೆಂಟ್ರಲ್‌ ಕಾಲೇಜಿನ ಕ್ಯಾಂಪಸ್‌ನಲ್ಲಿ ನಿತ್ಯವೂ ಕಂಡುಬರುವ ದೃಶ್ಯ.

ಸೆಂಟ್ರಲ್‌ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸದ್ದುಗದ್ದಲದಿಂದಾಗಿ ಅಸಹನೀಯ ವಾತಾವರಣದ ನಡುವೆ ಕಲಿಯಬೇಕಾದ ಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದು. ಐದು ವರ್ಷಗಳಿಂದ ಈ ಸಮಸ್ಯೆ ಬಿಗಡಾಯಿಸಿದೆ. ಈ ಸಮಸ್ಯೆಗೆ ಕಾರಣ ಏನು, ಪರಿಹಾರ ಯಾವಾಗ ಎಂದು ಪ್ರಶ್ನಿಸಿದರೆ ವಿಶ್ವವಿದ್ಯಾಲಯದವರು ಬೆಂಗಳೂರು ಮೆಟ್ರೊ ರೈಲು ನಿಗಮದ ಕಡೆಗೆ ಕೈ ತೋರಿಸುತ್ತಾರೆ. ಈ ಎಲ್ಲ ಸಮಸ್ಯೆಗಳಿಗೆ ನಿಗಮವೇ ಮೂಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ನಮ್ಮ ಮೆಟ್ರೊ’ದ ಪೂರ್ವ–ಪಶ್ಚಿಮ ಕಾರಿಡಾರ್‌ನ ಕಾಮಗಾರಿಗಾಗಿ ಐದು ವರ್ಷಗಳ ಹಿಂದೆ ಸೆಂಟ್ರಲ್‌ ಕಾಲೇಜು ಹಾಗೂ ಯುವಿಸಿಇ ಜಾಗವನ್ನು ನಿಗಮ ಪಡೆದಿತ್ತು. ವಿಶ್ವವಿದ್ಯಾಲಯದ 18 ಸಾವಿರ ಚದರ ಅಡಿ ಜಾಗವನ್ನು ನೀಡಲಾಗಿತ್ತು. ಪ್ರತಿ ಚದರ ಅಡಿಗೆ ನಿಗಮ ₹ 5 ಸಾವಿರ ನೀಡಿತ್ತು. ಜತೆಗೆ ತಾತ್ಕಾಲಿಕವಾಗಿ ಸೆಂಟ್ರಲ್‌ ಕಾಲೇಜಿನ ಜಾಗವನ್ನೂ ಪಡೆದಿತ್ತು’ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ಬಿ.ತಿಮ್ಮೇಗೌಡ ವಿವರಿಸುತ್ತಾರೆ.

‘ಕಾಮಗಾರಿ ಸಂದರ್ಭದಲ್ಲಿ ಸೆಂಟ್ರಲ್‌ ಕಾಲೇಜಿನ ತಡೆಗೋಡೆಯನ್ನು ಒಡೆಯಲಾಗಿತ್ತು. ಕೆ.ಆರ್‌.ರಸ್ತೆ, ನ್ಯಾಯಾಲಯದ ಕಡೆಗೆ ಹೋಗುವವರು ಸೆಂಟ್ರಲ್ ಕಾಲೇಜಿನ ಕ್ಯಾಂಪಸ್ ಅನ್ನು ಬಳಸಲಾರಂಭಿಸಿದರು. ಇದರಿಂದಾಗಿ ಕ್ಯಾಂಪಸ್‌ನ ರಸ್ತೆ ಹದಗೆಟ್ಟು ಹೋಯಿತು. ಮೆಟ್ರೊ ಕಾಮಗಾರಿ ಮುಗಿದ ಬಳಿಕ ರಸ್ತೆಯ ದುರಸ್ತಿ ಮಾಡಿಕೊಡುತ್ತೇವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದ್ದರು. ತಡೆಗೋಡೆ ಕಟ್ಟಿಸಿಕೊಡುವುದಾಗಿಯೂ ತಿಳಿಸಿದ್ದರು’ ಎಂದು ಅವರು ಹೇಳುತ್ತಾರೆ.

‘2012ರಲ್ಲಿ ಸಿವಿಲ್‌ ನ್ಯಾಯಾಲಯದ ಮುಂಭಾಗದ ಮೆಟ್ರೊ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಸಿಕ್ಕ ಬಂಡೆಯನ್ನು ಒಡೆಯಲು ಸಿಡಿಮದ್ದು ಬಳಸಿದಾಗ ಅಚಾತುರ್ಯ ಘಟಿಸಿತ್ತು. ಸಿಡಿತಲೆಯಿಂದ ಸ್ಫೋಟಗೊಂಡ ಕಲ್ಲಿನ ಚೂರುಗಳು ಸುರಕ್ಷತಾ ಗೋಡೆಯನ್ನು ದಾಟಿ ಸೆಂಟ್ರಲ್‌ ಕಾಲೇಜು ಅಂಗಳವನ್ನು ತಲುಪಿದ್ದವು.

ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿತ್ತು. ಬಳಿಕ ತಡೆಗೋಡೆಯನ್ನು ಏರಿಸಲಾಗಿತ್ತು. ಮೆಟ್ರೊ ಕಾಮಗಾರಿಯಿಂದಾಗಿ ಸೆಂಟ್ರಲ್ ಕಾಲೇಜಿಗೆ ನಷ್ಟವೇ ಜಾಸ್ತಿ. ಕ್ಯಾಂಪಸ್‌ನೊಳಗೆ ಅತಿಕ್ರಮ ಪ್ರವೇಶ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಅವರು ದೂರುತ್ತಾರೆ.

‘ಸುರಂಗ ಕಾಮಗಾರಿಗಾಗಿ ನಡೆಸಿದ ಸ್ಫೋಟಗಳಿಂದಾಗಿ ಸೆಂಟ್ರಲ್‌ ಕಾಲೇಜಿನ ಪಾರಂಪರಿಕ ಕಟ್ಟಡಗಳಿಗೆ ಹಾನಿ ಉಂಟಾಗಿತ್ತು. ಬಿರುಕು ಕಾಣಿಸಿಕೊಂಡು ಕಟ್ಟಡಗಳು ಸೋರಲಾರಂಭಿಸಿದ್ದವು. ಅವುಗಳನ್ನು ರಿಪೇರಿ ಮಾಡಲಾಗಿದೆ’ ಎಂದು ಅವರು ತಿಳಿಸುತ್ತಾರೆ.

‘ಮೆಟ್ರೊ ಕಾಮಗಾರಿ ಮುಗಿದು ಕೆಲವು ತಿಂಗಳುಗಳು ಕಳೆದಿವೆ. ನಿಗಮ ಮಾತು ಮರೆತಿದೆ. ರಸ್ತೆ ದುರಸ್ತಿ ಮಾಡಿಕೊಡಲು ಒಪ್ಪುತ್ತಿಲ್ಲ. ಈ ಸಂಬಂಧ ನಿಗಮಕ್ಕೆ ಎರಡು ಪತ್ರ ಬರೆಯಲಾಗಿದೆ. ಕಾಟಾಚಾರಕ್ಕೆ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಮೆಟ್ರೊ ನಿಗಮ ಪುಕ್ಕಟೆಯಾಗಿ ಕೆಲಸ ಆಗಬೇಕು ಎಂದು ಬಯಸುತ್ತಿದೆ. ಎರಡನೇ ಹಂತದ ಯೋಜನೆಯಲ್ಲಿ ಜ್ಞಾನಭಾರತಿ ನಿಲ್ದಾಣ ನಿರ್ಮಾಣಕ್ಕಾಗಿ ವಿವಿಯಿಂದ ಉಚಿತವಾಗಿ ಜಾಗ ಕೇಳಿತ್ತು. ಅದಕ್ಕೆ ನಾವು ಒಪ್ಪಿರಲಿಲ್ಲ. ಕೊನೆಗೆ ₹2.6 ಲಕ್ಷ ಪರಿಹಾರ ನೀಡಲು ಒಪ್ಪಿದೆ. ಇಂತಹ ಧೋರಣೆ ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಸೆಂಟ್ರಲ್‌ ಕಾಲೇಜಿನ ರಸ್ತೆ ಹಾಳಾಗಲು ನಾವು ಕಾರಣ ಅಲ್ಲ. ಅಲ್ಲಿ ಹಲವಾರು ಮರಗಳು ಇವೆ. ಹೀಗಾಗಿ ಡಾಂಬರು ಹೋಗಿದೆ. ತಡೆಗೋಡೆ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳುತ್ತಾರೆ.

** *** **
ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ನ ರಸ್ತೆಯನ್ನು ವಿವಿಯೇ ದುರಸ್ತಿ ಮಾಡಲಿದೆ. ಅದಕ್ಕೆ ₹60 ಲಕ್ಷ ಆಗಲಿದ್ದು, ಟೆಂಡರ್‌ ಕರೆಯಲಾಗಿದೆ.
-ಪ್ರೊ.ಬಿ.ತಿಮ್ಮೇಗೌಡ, ಕುಲಪತಿ

Comments are closed.