ವಿಶಾಖಪಟ್ಟಣ: ಹೈದರಾಬಾದ್ ನ ವಿಶಾಖಪಟ್ಟಣ ಜಿಲ್ಲೆಯ ಪಡೇರು ವಿಭಾಗದ ಪೊಲೀಸ್ ಸೂಪರಿಂಟೆಂಡೆಂಟ್ ಕೆ ಶಶಿ ಕುಮಾರ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಬೆಳಗ್ಗೆ ಆರು ಗಂಟೆ ಸಮಯದಲ್ಲಿ ಯಾವಾಗಲೂ ಶಶಿ ಕುಮಾರ್ ತಮ್ಮ ಸರ್ವೀಸ್ ರಿವಾಲ್ವರ್ ಅನ್ನು ಕ್ಲೀನ್ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು ತಲೆಗೆ ತಾಗಿ ಸಾವನ್ನಪ್ಪಿದ್ದಾರೆ, ಶಶಿಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬಲಹೀನ ಮನಸ್ಸಿನವರಲ್ಲ ಎಂದು ವಿಶೇಷಾಧಿಕಾರಿ ಅತ್ತಾಡ ಬಾಬೂಜಿ ಹೇಳಿದ್ದಾರೆ.
ಶಶಿ ಕುಮಾರ್ ಅವರ ಮನೆಯ ಹೊರಗೆ ಕಾವಲು ನಿಂತಿದ್ದ ಸೆಕ್ಯುರಿಟಿ ಗಾರ್ಡ್‌ಗೆ ಮನೆಯೊಳಗಿನಿಂದ ಗುಂಡು ಹಾರಾಟದ ಸದ್ದು ಕೇಳಿಬಂದಿದೆ. ಮನೆಯೊಳಗೆ ಧಾವಿಸಿ ಹೋದಾಗ ಅಲ್ಲಿ ಶಶಿಕುಮಾರ್ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಶಶಿ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯದಲ್ಲೇ ಅವರು ಅಸುನೀಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆ ವೇಳೆ ಶಶಿಕುಮಾರ್ ತಮ್ಮ ಮನೆಯಲ್ಲಿ ಒಂಟಿಯಾಗಿದ್ದರು. ಮೂಲತಃ ತಮಿಳುನಾಡಿನ ಸೇಲಂ ನವರಾಗಿರುವ ಶಶಿ ಕುಮಾರ್ ಅವರು 2012ರ ಐಪಿಎಸ್ ಬ್ಯಾಚಿನ ಅಧಿಕಾರಿಯಾಗಿದ್ದಾರೆ. ಅವರನ್ನು 2015ರ ಡಿಸೆಂಬರ್ 31ರಂದು ಪಡೇರು ವಿಭಾಗಕ್ಕೆ ನಿಯೋಜಿಸಲಾಗಿತ್ತು.
Comments are closed.