ನವದೆಹಲಿ ಜೂನ್ 16: ಸಾರಿಗೆ ಸಚಿವ ಗೋಪಾಲ್ ರಾಯ್ ರಾಜೀನಾಮೆ ಪ್ರಕರಣದಲ್ಲಿ ಪಕ್ಷದ ನಿಲುವಿಗೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದ ಆಮ್ ಆದ್ಮಿ ವಕ್ತಾರೆ ಅಲಕಾ ಲಂಬಾ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಕಾ ಲಂಬ ಮೂರು ದಿನಗಳ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಸಿಎಂ ಕೇಜ್ರಿವಾಲ್ ಅವರೇ ಒತ್ತಡ ಹೇರಿ ಗೋಪಾಲ್ ರಾಯ್ ರಾಜೀನಾಮೆ ಕೊಡಿಸಿದರು ಎಂದು ಹೇಳಿಕೆ ನೀಡಿದ್ದರು. ಆದರೆ, ಅನಾರೋಗ್ಯ ಕಾರಣದಿಂದ ಗೋಪಾಲ್ ರಾಯ್ ಸ್ವಇಚ್ಛೆಯಿಂದ ಸಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬುದು ಆಮ್ ಆದ್ಮಿ ಪಕ್ಷದ ನಿಲುವಾಗಿದೆ. ಅಲ್ಕಾ ಲಂಬಾದ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದು ಪಕ್ಷದ ಮುಖಂಡರ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ ಅವರನ್ನು ಎರಡು ತಿಂಗಳ ಕಾಲ ವಕ್ತಾರ ಸ್ಥಾನದಿಂದ ಕೆಳಗಿಳಿಸಲಾಗಿದೆ.
ಗೋಪಾಲ್ ರಾಯ್ ಪ್ರಕರಣವೇನು?
ಕಳೆದ ತಿಂಗಳು ದಿಲ್ಲಿ ಸರಕಾರ ಜಾರಿಗೆ ತಂದಿದ್ದ ಬಸ್ ಯೋಜನೆಯಲ್ಲಿ ಖಾಸಗಿ ಬಸ್ ಸಂಸ್ಥೆಯೊಂದಕ್ಕೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆಂದು ಸಾರಿಗೆ ಸಚಿವ ಗೋಪಾಲ್ ರಾಯ್ ವಿರುದ್ಧ ಆರೋಪ ಕೇಳಿಬಂದಿದೆ. ಪ್ರತಿಪಕ್ಷ ಬಿಜೆಪಿ ಈ ವಿಚಾರವನ್ನು ದಿಲ್ಲಿ ಸರಕಾರದ ವಿರುದ್ಧ ಅಸ್ತ್ರವಾಗಿ ಮಾಡಿಕೊಂಡು ರಾಯ್ ರಾಜೀನಾಮೆಗೆ ಒತ್ತಾಯಿಸುತ್ತಾ ಬಂದಿತ್ತು. ಈ ಹಿನ್ನೆಲೆಯಲ್ಲಿ ಗೋಪಾಲ್ ರಾಯ್ ರಾಜೀನಾಮೆ ನೀಡಿದ್ದರು.
ಗೋಪಾಲ್ ರಾಯ್ ಯಾವುದೇ ತಪ್ಪು ಎಸಗಿಲ್ಲ ಎಂಬುದು ಆಮ್ ಆದ್ಮಿಯ ಗಟ್ಟಿ ನಿಲುವಾಗಿದೆ. ಗೋಪಾಲ್ ರಾಯ್ ಅವರಿಗೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಅವರಿಗೆ ಸಾರಿಗೆ ಸಚಿವ ಸ್ಥಾನವನ್ನು ನಿಭಾಯಿಸಲು ಕಷ್ಟವಾಗುತ್ತಿದೆ. ಜೊತೆಗೆ ಅವರಿಗೆ ಸಾರಿಗೆ ಸೇರಿದಂತೆ ನಾಲ್ಕೈದು ಇಲಾಖೆಗಳ ಜವಾಬ್ದಾರಿ ಇದೆ. ಹೀಗಾಗಿ, ಅವರು ಸಾರಿಗೆ ಇಲಾಖೆಯಿಂದ ಹಿಂದೆ ಸರಿದಿದ್ದಾರೆ ಎಂದು ಆಮ್ ಆದ್ಮಿ ಮುಖಂಡರು ಹೇಳಿಕೊಂಡಿದ್ದಾರೆ. ಆದರೆ, ಸಚಿವರು ಭ್ರಷ್ಟಾಚಾರ ನಡೆಸಿದ್ದರಿಂದ ಒತ್ತಡಕ್ಕೊಳಗಾಗಿ ರಾಜೀನಾಮೆ ನೀಡಲಾಗಿದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ.
ಇದೇ ವೇಳೆ, ವಕ್ತಾರರಾಗಿ ಪಕ್ಷದ ಅಧಿಕೃತ ನಿಲುವನ್ನು ವ್ಯಕ್ತಪಡಿಸಬೇಕಿದ್ದ ಅಲಕಾ ಲಂಬಾ, ವಿಪಕ್ಷಗಳ ವಾದಕ್ಕೆ ಪೂರಕವಾದ ಹೇಳಿಕೆ ನೀಡಿರುವುದು ಗಮನಾರ್ಹವೆನಿಸಿದೆ.
ಇದೇ ವೇಳೆ, ಸತ್ಯೇಂದರ್ ಜೈನ್ ಎಂಬುವವರಿಗೆ ಸಾರಿಗೆ ಸಚಿವ ಸ್ಥಾನದ ಜವಾಬ್ದಾರಿ ವಹಿಸಲಾಗಿದೆ..
Comments are closed.