ಉಳ್ಳಾಲ, ಜೂ. 16 : ಅಂಗವೈಕಲ್ಯದ ನಾಟಕವಾಡಿ ಮನೆ-ಮನೆಗೆ ತೆರಳಿ ಹಣ ಸಂಗ್ರಹ ಮಾಡುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಕೊಣಾಜೆಯಲ್ಲಿ ಬುಧವಾರ ನಡೆದಿದೆ. ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ಅಭಿಷೇಕ್ ಹಾಗೂ ಮನ್ಜೀತ್ ಎಂದು ಗುರುತಿಸಲಾಗಿದೆ.
ರಂಝಾನ್ ಉಪವಾಸದ ತಿಂಗಳಾಗಿರುವುದರಿಂದ ಆರೋಪಿಗಳು ಮುಸ್ಲಿಂ ಸಮುದಾಯದ ಟೋಪಿ ಧರಿಸಿದ್ದು ಮಾತ್ರವಲ್ಲದೆ ಆರೋಪಿಗಳಲ್ಲಿ ಓರ್ವ ಬಾಯಿ ಬರದಂತೆ ಹಾಗೂ ಇನ್ನೊರ್ವ ಅಂಗ ವೈಕಲ್ಯದ ರೀತಿಯಲ್ಲಿ ವರ್ತಿಸಿ ಕೊಣಾಜೆ ಪರಿಸರದ ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡುತ್ತಿದ್ದರು. ಹೀಗೆ ಹಣ ವಸೂಲಿ ಮಾಡುತ್ತಿದ್ದಾಗ ಒಂದು ಮನೆಯಲ್ಲಿ ಅನುಮಾನಗೊಂಡು ಇವರನ್ನು ಬೆದರಿಸಿ ವಿಚಾರಣೆ ನಡೆಸಿದಾಗ ಇವರ ನಿಜ ಬಣ್ಣ ಬಯಲಾಗಿದೆ. ಬಳಿಕ ಸಾರ್ವಜನಿಕರು ಒಟ್ಟು ಸೇರಿದಾಗ ಎಲ್ಲಾ ವಿಷಯವನ್ನು ಬಾಯಿಬಿಟ್ಟಿದ್ದಾರೆ.
ಆರೋಪಿಗಳು ಅರೇಬಿಕ್ ಭಾಷೆಯಲ್ಲಿ ಹಾಗೂ ಆಂಗ್ಲ ಭಾಷೆಯಲ್ಲಿ ಬರೆದ ತಮ್ಮ ಅಂಗವೈಕಲ್ಯದ ನಕಲಿ ಪ್ರಮಾಣ ಪತ್ರವನ್ನು ತೋರಿಸಿ ವಂಚಿಸುತ್ತಿದ್ದರು. ಉತ್ತರ ಪ್ರದೇಶದಿಂದ ಬಂದಿರುವ ಇವರು ಮಂಗಳೂರಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದು ಮಾತ್ರವಲ್ಲದೆ ಇವರ ತಂಡದಲ್ಲಿ ಒಟ್ಟು 25 ಮಂದಿ ಇದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳನ್ನು ಸ್ಥಳೀಯರು ಹಿಡಿದು ಕೊಣಾಜೆ ಠಾಣೆಗೆ ಒಪ್ಪಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.