ಕರ್ನಾಟಕ

ಕೈಗಾರಿಕೆಗಳಿಗೆ ಉತ್ತೇಜನ: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

sidduuuಬೆಂಗಳೂರು, ಜೂ. ೨೯- ರಾಜ್ಯದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರ ಹಲವು ಪೂರಕ ನೀತಿಗಳನ್ನು ಪ್ರಕಟಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಇಲ್ಲಿ ಹೇಳಿದ್ದಾರೆ.

ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಕೈಗಾರಿಕೆಗಳ ಪಾತ್ರವೂ ಹಿರಿದಾಗಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ ಉದ್ಯಮಕ್ಕೆ ಪೂರಕವಾದ ನೀತಿಗಳಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ನಗರದಲ್ಲಿಂದು ಹಮ್ಮಿಕೊಂಡಿದ್ದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ ಯೋಜನೆಗಳಲ್ಲಿ ಕರ್ನಾಟಕದ ಪಾತ್ರ ಮತ್ತು ಮುಂದಿನ ಪಾತ್ರ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಎಫ್‌ಕೆಸಿಸಿಐ ಉದ್ಯೋಗ ಸೃಷ್ಟಿಗೆ ಹಾಗೂ ಆರ್ಥಿಕ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯವನ್ನು ಅಬಿವೃದ್ಧಿಪಥದಲ್ಲಿ ಕೊಂಡೊಯ್ಯುವುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ರಾಜ್ಯದ ಆರ್ಥಿಕತೆ ಉತ್ತಮಗೊಳ್ಳಲು ಎಫ್‌ಕೆಸಿಸಿಐ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಎಫ್‌ಕೆಸಿಸಿಐ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಶತಮಾನೋತ್ಸವ ಭವನ ನಿರ್ಮಾಣಕ್ಕಾಗಿ ೧೦ ಕೋಟಿ ರೂ. ನೀಡಲು ನಿರ್ಧರಿಸಿದ್ದು, ಮೊದಲ ಹಂತವಾಗಿ ೫ ಕೋಟಿ ರೂ.ಗಳನ್ನು ಇಂದು ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕವಾದ ನೀತಿಗಳನ್ನು ಕೈಗೊಂಡಿದ್ದು, ಆರೋಗ್ಯಕರ ವಾತಾವರಣ ಸೃಷ್ಟಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಕಳೆದೆರಡು ವರ್ಷಗಳಲ್ಲಿ ಉತ್ಪಾದನಾ ವಲಯದಲ್ಲಿ ಗಣನೀಯ ಸಾಧನೆ ಮಾಡಲಾಗಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಆರಂಭವಾಗುವುದಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಅನೇಕ ವಿದೇಶಿ ಕಂಪನಿಗಳು ಕಾರ್ಯಾರಂಭ ಮಾಡಿದೆ. ರಾಜ್ಯ ಸರ್ಕಾರ ಹೂಡಿಕೆದಾರರಿಗೆ ಎಲ್ಲ ರೀತಿಯ ಸಹಾಯ ಸಹಕಾರವನ್ನು ನೀಡುತ್ತಿದೆ ಎಂದು ಹೇಳಿದರು.
ಯುವ ಜನಾಂಗ ಹೆಚ್ಚೆಚ್ಚು ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕು. ಅಂತವರಿಗೆ ಎಫ್‌ಕೆಸಿಸಿಐ ಹೆಚ್ಚಿನ ಸಹಕಾರ ನೀಡಬೇಕು. ಉದ್ಯಮಿಗಳು ಬೆಂಗಳೂರಿನಲ್ಲಿಯೇ ಉದ್ಯಮ ಸ್ಥಾಪನೆ ಮಾಡುತ್ತಿದ್ದು, ರಾಜ್ಯದ ವಿವಿಧ ನಗರಗಳಲ್ಲೂ ಉದ್ಯಮ ಸ್ಥಾಪನೆಗೆ ಮುಂದಾಗಬೇಕು. ಅದಕ್ಕೆ ಪೂರಕವಾದ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸುತ್ತಿದೆ ಎಂದರು.
ಇನ್‌ವೆಸ್ಟ್ ಕರ್ನಾಟಕ ಕಂಪನಿಯನ್ನು ಸರ್ಕಾರ ಆರಂಭಿಸಿದ್ದು, ೯ ಮಂದಿ ನಿರ್ದೇಶಕರಲ್ಲಿ ಆರು ಮಂದಿ ನಿರ್ದೇಶಕರು ಕೈಗಾರಿಕಾ ವಲಯದವರೇ ಇದ್ದಾರೆ. ಇದರಿಂದಾಗಿ ರಾಜ್ಯಕ್ಕೆ ಹೆಚ್ಚೆಚ್ಚು ಬಂಡವಾಳಗಾರರನ್ನು ಆಕರ್ಷಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಎಫ್‌ಕೆಸಿಸಿ ಅಧ್ಯಕ್ಷ ತಲ್ಲಂ ಆರ್. ದ್ವಾರಕನಾಥ್, ಹಿರಿಯ ಉಪಾಧ್ಯಕ್ಷ ಎಂ.ಸಿ. ದಿನೇಶ್, ಉಪಾಧ್ಯಕ್ಷ ಕೆ.ರವಿ, ನಿಕಟಪೂರ್ವ ಅಧ್ಯಕ್ಷ ಸಂಪತ್ ರಾಮನ್, ಮಹಾ ಪ್ರಧಾನ ಕಾರ್ಯದರ್ಶಿ ಎನ್. ಪಾರ್ಥಸಾರಥಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments are closed.