ರಾಯಚೂರು: ಅಕ್ಕನ ಮಗಳ ಮೇಲಿನ ವ್ಯಾಮೋಹದಿಂದ ವೈದ್ಯ ಪತಿಯೊಬ್ಬ ತನ್ನ ಪತ್ನಿಗೆ ಎಚ್ ಐ ವಿ ಸೋಂಕು ಇರುವ ರಕ್ತವನ್ನು ಇಂಜೆಕ್ಟ್ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ವೈದ್ಯನಾಗಿದ್ದ ಪತಿ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಚ್ ಐವಿ ರಕ್ತ ಇಂಜೆಕ್ಟ್ ಮಾಡಿದ್ದಾನೆ ಎಂದು ನೊಂದ ಪತ್ನಿ ದೂರು ನೀಡಿದ್ದಾರೆ. ಈ ಕೃತ್ಯದಲ್ಲಿ ಪತಿಯ ಪತಿ ತಂದೆ, ತಾಯಿ, ಸಹೋದರಿ ಸಹಕಾರವಿದೆ ಎಂದು ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪೀಡಿತೆ ದೂರು ದಾಖಲಿಸಿದ್ದಳು. ಅಲ್ಲದೇ ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ.
ಪತಿ ಮಲ್ಲಿಕಾರ್ಜುನ್ ಹೊಸಳ್ಳಿಯಲ್ಲಿ ಆರ್ಎಂಪಿ ವೈದ್ಯನಾಗಿದ್ದು ಅಕ್ಕನ ಮಗಳೊಂದಿಗೆ ಇನ್ನೊಂದು ಮದುವೆಯಾಗಲು ಎಚ್ಐವಿ ರಕ್ತ ಇಂಜೆಕ್ಟ್ ಮಾಡಿದ್ದಾನೆ ಅಂತ ನೊಂದ ಪತ್ನಿ 2015ರ ಡಿಸೆಂಬರ್ ನಲ್ಲಿ ದೂರು ದಾಖಲಿಸಿದ್ದಳು. ಸಿಂಧನೂರು ಗ್ರಾಮೀಣ ಪೊಲೀಸರು ದೂರಿನ ಅನ್ವಯ ಮಲ್ಲಿಕಾರ್ಜುನ್ ಹಾಗೂ ಆತನ ತಂದೆ ತಾಯಿ ಮೇಲೆ ಎರಡು ತಿಂಗಳ ಕೆಳಗೆ ಚಾರ್ಜ್ಶೀಟ್ ಹಾಕಿ ಬಂಧಿಸಿದ್ದರು.
ಈಗ ನೊಂದ ಮಹಿಳೆ ತನಗೆ ಅನ್ಯಾಯವಾಗುತ್ತಿದ್ದು ತನಿಖಾಧಿಕಾರಿಯನ್ನ ಬದಲಾಯಿಸಿ ಪಾರದರ್ಶಕ ತನಿಖೆ ನಡೆಸಿ ನ್ಯಾಯಕೊಡಿಸಬೇಕು ಅಂತ ಎಸ್ಪಿ ಚೇತನ್ ಸಿಂಗ್ ರಾಥೋರ್ಗೆ ಮನವಿ ಮಾಡಿದ್ದಾಳೆ. ತನಿಖಾಧಿಕಾರಿ ಸಿಂಧನೂರು ಗ್ರಾಮೀಣ ಸಿಪಿಐ ರಮೇಶ್ ರೊಟ್ಟಿಯನ್ನ ಬದಲಿಸಿ ಬೇರೊಬ್ಬರಿಗೆ ತನಿಖೆವಹಿಸಬೇಕು ಅಂತ ಮನವಿ ಪತ್ರದಲ್ಲಿ ತಿಳಿಸಿದ್ದಾಳೆ.
ಆದ್ರೆ ಈಗಾಗಲೇ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿರುವುದರಿಂದ ನ್ಯಾಯಾಲಯ ಅನುಮತಿ ನೀಡಿದರೆ ಮಾತ್ರ ತನಿಖಾಧಿಕಾರಿಯನ್ನ ಬದಲಿಸುವುದಾಗಿ ಎಸ್ಪಿ ಚೇತನ್ ಸಿಂಗ್ ರಾಥೋರ್ ಹೇಳಿದ್ದಾರೆ.
Comments are closed.