ನವದೆಹಲಿ: ಎಐಸಿಸಿ ಉಪಾಧ್ಯಕ್ಷರಾಗಿ ರಾಹುಲ್ ಗಾಂಧಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ಮುಂಚೂಣಿಗೆ ತರಲು ಕಾಂಗ್ರೆಸ್ ಹೊರಟಿದೆ. ಅತ್ಯಂತ ಹಳೆಯ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕುಟುಂಬವೇ ಒಂದು ಪಕ್ಷವಾಗಿ ಹೋಗಿದೆ. ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿಯವರನ್ನು ಮುಂಚೂಣಿಗೆ ತರಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಅನುಮತಿ ಮೇರೆಗೆ ಪಕ್ಷದ ಉಸ್ತುವಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಶೀಘ್ರದಲ್ಲೇ ಪ್ರಿಯಾಂಕಾಗಾಂಧಿಯನ್ನು ಭೇಟಿ ಮಾಡಿ ಉತ್ತರ ಪ್ರದೇಶದ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದು, ಇದಕ್ಕೆ ಪ್ರಿಯಾಂಕಾ ಕೂಡ ಒಪ್ಪಿದ್ದಾರೆ ಎನ್ನಲಾಗಿದೆ.
ಪ್ರಿಯಾಂಕಾ ವಾದ್ರಾ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದು, 2019ರ ಲೋಕಸಭೆ ಚುನಾವಣೆ ವೇಳೆ ಅಮೇಠಿಯಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಮೂಲಕ ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎನ್ನುವ ಕಾಂಗ್ರೆಸ್ ಕಾರ್ಯಕರ್ತರ ಕನಸು ನನಸಾಗುವ ಕಾಲವೂ ಸಮೀಪಿಸಿದೆ. ಗಾಂಧಿ ಕುಟುಂಬಕ್ಕೆ ಆಪ್ತವಾದ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ನ್ಯೂಸ್ 18 ಈ ವರದಿ ಮಾಡಿದೆ. ಇದೇ ವೇಳೆ, ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಅವರು ಬಿರುಸಿನ ಪ್ರಚಾರ ನಡೆಸಲಿದ್ದಾರೆ ಎಂದೂ ಹೇಳಲಾಗಿದೆ.
ಈವರೆಗೆ ತಮ್ಮ ಸಹೋದರ ರಾಹುಲ್ಗಾಂಧಿ ಹಾಗೂ ಅಮ್ಮ ಸೋನಿಯಾ ಅವರ ಕ್ಷೇತ್ರಗಳಾದ ಅಮೇಠಿ ಮತ್ತು ರಾಯ್ಬರೇಲಿಯಲ್ಲಿ ಮಾತ್ರವೇ ಪ್ರಿಯಾಂಕಾ ಪ್ರಚಾರ ನಡೆಸುತ್ತಿದ್ದರು. ಪಕ್ಷವನ್ನು ಮುನ್ನಡೆಸುವಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಎಷ್ಟೇ ಒತ್ತಾಯಿಸಿದ್ದರೂ ಅವರು ಅದಕ್ಕೆ ಮನಸ್ಸು ಮಾಡಿರಲಿಲ್ಲ. ಆದರೆ, ಈಗ ಕಾಂಗ್ರೆಸ್ ತೀರಾ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು, ಲೋಕಸಭೆ ಚುನಾವಣೆ ಬಳಿಕ ಒಂದೊಂದೇ ರಾಜ್ಯಗಳೂ ಪಕ್ಷದ ಕೈತಪ್ಪುತ್ತಿರುವುದರಿಂದ ಪ್ರಿಯಾಂಕಾ ಅವರು ರಾಜಕಾರಣದಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯು ಸತತವಾಗಿ ಪತಿ ರಾಬರ್ಟ್ ವಾದ್ರಾ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದು ಕೂಡ ಪ್ರಿಯಾಂಕಾರ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
ಪ್ರಶಾಂತ್ ಕಿಶೋರ್ ತಂತ್ರ:
ಕಾಂಗ್ರೆಸ್ಗೆ ಮರುಜೀವ ಕೊಡಲು ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ. ರಾಹುಲ್ ಗಾಂಧಿ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಪ್ರಿಯಾಂಕಾರಿಗೆ ವಿಸ್ತೃತ ರಾಜಕೀಯ ಪಾತ್ರ ನೀಡಿ, ಉತ್ತರ ಪ್ರದೇಶದಾದ್ಯಂತ ಪ್ರಚಾರಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಹಿಂದೆ ರಾಜಕೀಯ ತಂತ್ರ ನಿರೂಪಕ ಪ್ರಶಾಂತ್ ಕಿಶೋರ್ ಅವರ ಪಾತ್ರವೂ ಇರಬಹುದು ಎನ್ನಲಾಗಿದೆ. ಪ್ರಿಯಾಂಕಾರನ್ನು ಉತ್ತರ ಪ್ರದೇಶ ಸಿಎಂ ಅಭ್ಯರ್ಥಿಯೆಂದು ಬಿಂಬಿಸುವಂತೆ ಕಿಶೋರ್ ಈ ಹಿಂದೆಯೇ ಕಾಂಗ್ರೆಸ್ಗೆ ಸಲಹೆ ನೀಡಿದ್ದರು. ಆದರೆ, ಪ್ರಿಯಾಂಕಾರನ್ನು ಕೇವಲ ಉತ್ತರ ಪ್ರದೇಶಕ್ಕೆ ಸೀಮಿತಗೊಳಿಸದೆ 2019ರ ಲೋಕಸಭೆ ಚುನಾವಣೆಯಲ್ಲಿ ಬಳಸಿಕೊಳ್ಳುವುದು ಕಾಂಗ್ರೆಸ್ನ ಇರಾದೆ.
ಅಮೇಠಿಗೆ ಪ್ರಿಯಾಂಕಾ, ರಾಯ್ಬರೇಲಿಗೆ ರಾಹುಲ್:
ಮೂಲಗಳು ಹೇಳುವ ಪ್ರಕಾರ, ಪ್ರಿಯಾಂಕಾ 2019ರಲ್ಲಿ ಅಮೇಠಿಯಿಂದ ಕಣಕ್ಕಿಳಿಯಲಿದ್ದಾರೆ. ರಾಹುಲ್ ಅವರು ರಾಯ್ಬರೇಲಿಗೆ ಕ್ಷೇತ್ರ ಬದಲು ಮಾಡುವ ಸಾಧ್ಯತೆಯಿದೆ. ಬಿಜೆಪಿಯ ಅಭ್ಯರ್ಥಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಎದುರಿಸಲು ಪ್ರಿಯಾಂಕಾ ಅವರೇ ಸಮರ್ಥರು ಎನ್ನುವ ಭಾವನೆಯೂ ಕಾಂಗ್ರೆಸ್ ವಲಯದಲ್ಲಿದೆ. ಪ್ರತಿಸ್ಪರ್ಧಿಗಳನ್ನು ಎದುರಿಸುವ, ಅವರಿಗೆ ತಿರುಗೇಟು ನೀಡುವ ಕಲೆಯೂ ಪ್ರಿಯಾಂಕಾರಿಗೆ ಒಲಿದಿರುವುದು ಈ ನಿರ್ಧಾರಕ್ಕೆ ಮತ್ತೊಂದು ಕಾರಣ. ಈ ಹಿಂದೆ 2004ರ ಚುನಾವಣೆ ವೇಳೆ ತನ್ನ ತಾಯಿ ಸೋನಿಯಾರನ್ನು ಪ್ರತಿಪಕ್ಷಗಳು ಇಟಲಿ ಮೂಲದವರೆಂದು ಹಳಿಯುತ್ತಿದ್ದಾಗ, ದಿಟ್ಟತನವಿರುವ ಮಹಿಳೆಯನ್ನು ನೋಡುವಾಗ ಪುರುಷರಿಗೆ ಭಯ ಹುಟ್ಟುತ್ತಿದೆ ಎಂದು ಹೇಳುವ ಮೂಲಕ ಪ್ರಿಯಾಂಕಾ ಎಲ್ಲರ ಬಾಯಿ ಮುಚ್ಚಿಸಿದ್ದರು. ಇತ್ತೀಚೆಗಷ್ಟೇ, ಕಾಂಗ್ರೆಸ್ ಒಂದು ವಯಸ್ಸಾಗುತ್ತಿರುವ ಪಕ್ಷ ಎಂದು ಬಿಜೆಪಿ ವ್ಯಂಗ್ಯವಾಡಿದಾಗ ತಿರುಗೇಟು ನೀಡಿದ್ದ ಪ್ರಿಯಾಂಕಾ, ನಾನೇನು ನಿಮಗೆ ವಯಸ್ಸಾದವಳಂತೆ ಕಾಣುತ್ತಿದ್ದೇನಾ ಎಂದು ಪ್ರಶ್ನಿಸಿ ಬೆರಗು ಮೂಡಿಸಿದ್ದರು.
Comments are closed.