ಬೈರುತ್: ಪವಿತ್ರ ರಂಜಾನ್ ಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮುಸ್ಲಿಮರ ಪವಿತ್ರ ಕ್ಷೇತ್ರ ಮದೀನಾ ಮತ್ತು ಖಾತಿಫ್, ಜೆದ್ದಾ ನಗರಗಳಲ್ಲಿ ಸೋಮವಾರ ರಾತ್ರಿ ಸರಣಿ ಆತ್ಮಾಹುತಿ ದಾಳಿಗಳು ಸಂಭವಿಸಿದ್ದು, ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.
ಸೌದಿ ಅರೇಬಿಯಾದ ಪ್ರಮುಖ ಮೂರು ನಗರಗಳಾದ ಮದೀನಾ ಮತ್ತು ಖಾತಿಫ್, ಜೆದ್ದಾ ನಗರಗಳ 4 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿದ್ದು, ಆತ್ಮಾಹುತಿ ದಾಳಿಯಲ್ಲಿ ದಾಳಿಕೋರ ಉಗ್ರರ ಸಹಿತ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಸುಮಾರು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ರಂಜಾನ್ ಮಾಸವಾದ್ದರಿಂದ ಪವಿತ್ರ ಮದೀನಾದಲ್ಲಿ ಲಕ್ಷಾಂತರ ಭಕ್ತರು ನೆರೆದಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡ ಇಸಿಸ್ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದಾರೆ.
ಸೋಮವಾರ ಸಂಜೆ ವೇಳೆಗೆ ಮದೀನಾದಲ್ಲಿ ಪ್ರವಾದಿ ಮಹಮ್ಮದ್‌ರ ಮಸೀದಿ ಪಕ್ಕದಲ್ಲಿ ವ್ಯಕ್ತಿಯೊಬ್ಬಉಗ್ರಗಾಮಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಇದು ಮೊದಲ ಸ್ಫೋಟವಾಗಿದ್ದು, ಶಿಯಾ ಮುಸ್ಲಿಮರೇ ಹೆಚ್ಚಿರುವ ಖಾತಿಫ್ ನಗರದ 2ನೇ ಸ್ಫೋಟ ಸಂಭವಿಸಿದೆ. ಖಾತಿಫ್ ನಗರದ ಪ್ರಮುಖ ಮಸೀದಿ ಬಳಿ ಎರಡು ಸ್ಫೋಟ ನಡೆದಿದ್ದು, ಮೊದಲ ಸ್ಫೋಟ ಕಾರಲ್ಲಿ ಮತ್ತೂಂದು ಸ್ಫೋಟ ಮಸೀದಿ ಬಳಿಯೇ ನಡೆದಿದೆ.
ಇನ್ನು ಜೆಡ್ಡಾದ ಅಮೆರಿಕದ ದೂತವಾಸದ ಬಳಿ ಮತ್ತೊಂದು ಸ್ಫೋಟ ಸಂಭವಿಸಿದ್ದು, ಆತ್ಮಾಹುತಿ ಬಾಂಬ್ರ್ ಒಬ್ಬ ದೂತಾವಾಸ ಕಚೇರಿಯ ಸಮೀಪ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಅದೃಷ್ಟವಶಾತ್ ಈ ದಾಳಿಯಲ್ಲಿ ಆತ್ಮಾಹುತಿ ದಾಳಿಕೋರ ಮಾತ್ರ ಸತ್ತಿದ್ದು, ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕೇವಲ 24 ಗಂಟೆಗಳ ಅವಧಿಯಲ್ಲಿ ಮೂರು ಸರಣಿ ಬಾಂಬ್ ಸ್ಫೋಟಗಳು ಸಂಭಿವಿಸಿದ್ದು, ಪವಿತ್ರ ರಂಜಾನ್ ಉಪವಾಸದಲ್ಲಿರುವ ಮುಸ್ಲಿಮರು ಘಟನೆಯಿಂದಾಗಿ ತೀವ್ರ ಭೀತಿಗೆ ಒಳಗಾಗಿದ್ದಾರೆ.
ಪ್ರಸ್ತುತ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತಿಲ್ಲವಾದರೂ, ಈ ನಗರಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಹವಣಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೇ ಈ ದಾಳಿಗಳನ್ನು ನಡೆಸಿದೆ ಎಂದು ಹೇಳಲಾಗುತ್ತಿದೆ.
Comments are closed.