ಅಂತರಾಷ್ಟ್ರೀಯ

ಸೆಲ್ಪಿಯಿಂದ ಅಗುವ ಪರಿಣಾಮ ….ದುಷ್ಪರಿಣಾಮ

Pinterest LinkedIn Tumblr

selfi-webfi

ವಾಷಿಂಗ್ಟನ್ ಜು.8 :  ಸ್ಮಾರ್ಟ್ ಫೋನ್ಗಳು ಜನರ ಕೈಗೆ ಸಿಕ್ಕಿದ್ದೇ ಸಿಕ್ಕಿದ್ದು, ಜನ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಸೆಲ್ಫಿ ತೆಗೆದುಕೊಳ್ಳಲು ಶುರುವಿಟ್ಟುಕೊಂಡರು. ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಪ್ರಪಾತಕ್ಕೆ ಬಿದ್ದು, ನದಿಗೆ ಬಿದ್ದು, ವಾಹನಗಳಿಗೆ ಸಿಕ್ಕು ಸಾವನ್ನೂ ತಂದುಕೊಂಡರು. ಈ ಸೆಲ್ಪಿ ಅವಾಂತರ ಇಷ್ಟಕ್ಕೇ ನಿಂತಿಲ್ಲ. ಈಗ ಮತ್ತೊಂದು ಹೊಸ ಸಮಸ್ಯೆಯನ್ನು ತಂದಿಟ್ಟಿದೆ. ಅದೇ ‘ಸೆಲ್ಫಿ ಎಲ್ಬೊ’ ಎಂಬ ಆರೋಗ್ಯ ಸಮಸ್ಯೆ.

ಹೌದು, ಹೆಚ್ಚಾಗಿ ಸೆಲ್ಫಿ ತೆಗೆದುಕೊಳ್ಳುವುದರಿಂದ ‘ಸೆಲ್ಫಿ ಎಲ್ಬೊ’ ಎಂಬ ಸಮಸ್ಯೆ ಕಾಡುತ್ತದೆ ಎಂದು ‘ದ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಸೆಲ್ಫಿ ತೆಗೆದುಕೊಳ್ಳುವವರ ಮುಂಗೈ ಮಣಿಕಟ್ಟಿನಲ್ಲಿ, ಮೊಣಕೈಯಲ್ಲಿ ನೋವು ಕಾಣಿಸಿಕೊಳ್ಳುವ ಈ ಸಮಸ್ಯೆಗೆ ‘ಸೆಲ್ಫಿ ಎಲ್ಬೊ’ ಎಂದು ಹೆಸರಿಡಲಾಗಿದೆ.
ಮೊಣಕೈ ನೋವು, ಮುಂಗೈ ಮಣಿಕಟ್ಟಿನ ನೋವಿನ ಸಮಸ್ಯೆ ಎಂದು ಹೇಳಿಕೊಂಡು ವೈದ್ಯರಲ್ಲಿಗೆ ಬರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇಂಥ ಸಮಸ್ಯೆಗಳು ಹೊಸದಾಗಿ ಬರುತ್ತಿದ್ದು, ಇದಕ್ಕೆ ಹೆಚ್ಚಾಗಿ ಸೆಲ್ಫಿ ತೆಗೆದುಕೊಳ್ಳುವ ಗೀಳೇ ಕಾರಣ ಎಂದು ಅಮೆರಿಕನ್ ಫಿಸಿಕಲ್ ಥೆರಪಿ ಅಸೋಸಿಯೇಶನ್ನ ವಕ್ತಾರೆ, ವೈದ್ಯೆ ಮೇರಿ ಆಯನ್ ವಿಲ್ಮಾರ್ಟ್ ಹೇಳಿದ್ದಾರೆ.

ಸೆಲ್ಫಿ ಎಲ್ಬೊ ಎಂಬುದು ಟೆನಿಸ್ ಎಲ್ಬೊ ಮತ್ತು ಗಾಲ್ಫರ್ ಎಲ್ಬೊದಂಥ ಸಮಸ್ಯೆಯೇ ಆಗಿದೆ. ಟೆನಿಸ್ ಮತ್ತು ಗಾಲ್ಫ್ ಕ್ರೀಡಾಪಟುಗಳು ಹೆಚ್ಚಾಗಿ ಕೈಯನ್ನು ಮಡಿಸುವುದರಿಂದ ಈ ಸಮಸ್ಯೆಕಾಡುತ್ತದೆ. ಅಂಥದ್ದೇ ಸಮಸ್ಯೆ ಸೆಲ್ಫಿ ಎಲ್ಬೋದಲ್ಲೂ ಕಾಣಿಸಿಕೊಂಡಿದೆ.

ಸೆಲ್ಫಿ ತೆಗೆದುಕೊಳ್ಳುವಾಗ ಜನ ಕೈಯನ್ನು ಡೊಂಕಾಗಿ ಮಡಿಸುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ಎರಡೂ ಕೈಗಳಲ್ಲಿ ಮೊಬೈಲ್ ಹಿಡಿದು ಸೆಲ್ಫಿ ತೆಗೆದುಕೊಳ್ಳುವುದರಿಂದ ಸಮಸ್ಯೆಗೆ ಕೊಂಚ ಪರಿಹಾರ ಸಿಗಬಹುದು. ಇದಕ್ಕೂ ಮುಖ್ಯವಾಗಿ ಸುಮ್ಮಸುಮ್ಮನೆ ಸೆಲ್ಫಿ ತೆಗೆದುಕೊಳ್ಳುವ ಹವ್ಯಾಸವನ್ನು ಬಿಡುವುದೇ ಇದಕ್ಕೆ ಸೂಕ್ತ ಪರಿಹಾರ ಎಂದೂ ವೈದ್ಯರು ಸಲಹೆ ನೀಡಿದ್ದಾರೆ.

ಸೆಲ್ಫಿ:
ಸೆಲ್ಫಿ ತೆಗೆದುಕೊಳ್ಳುವ ಹವ್ಯಾಸದಿಂದ ಮೊಣಕೈ, ಮುಂಗೈ ಮಣಿಕಟ್ಟಿನ ನೋವು
ಸೆಲ್ಫಿ ಎಲ್ಬೊ ಸಮಸ್ಯೆಗಾಗಿ ವೈದ್ಯರಲ್ಲಿಗೆ ಬರುವವರ ಸಂಖ್ಯೆ ಹೆಚ್ಚಳ
ಟೆನಿಸ್ ಎಲ್ಬೊ, ಗಾಲ್ಫ್ ಎಲ್ಬೊ ಸ್ವರೂಪದ ಸಮಸ್ಯೆ ಇದು
ಸೆಲ್ಫಿ ಸ್ಟಿಕ್ನಿಂದಲೂ ಪರಿಹಾರವಿಲ್ಲ; ವ್ಯಾಯಾಮ ಒಳ್ಳೆಯದು
ವಿನಾಕಾರಣ ಸೆಲ್ಫಿ ತೆಗೆಯುವುದನ್ನು ನಿಲ್ಲಿಸಿದರೆ ಶಾಶ್ವತ ಪರಿಹಾರ

Comments are closed.