ಕರ್ನಾಟಕ

ಆತ್ಮಹತ್ಯೆ ದಾರಿತುಳಿಯದಿರಿ, ನಿಮ್ಮ ಸಮಸ್ಯೆಗೆ ಸ್ಪಂದಿಸಲು ಸಿದ್ದ : ಪರಮೇಶ್ವರ್

Pinterest LinkedIn Tumblr

G-Parameshwar

ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲಾಗುವುದು,ಯಾವುದೇ ಕಾರಣಕ್ಕೂ ಅಧಿಕಾರಿಗಳು ಆತ್ಮಹತ್ಯೆಯ ದಾರಿ ತುಳಿಯಬೇಡಿ. ನಿಮ್ಮ ಸಮಸ್ಯೆಗೆ ಸ್ಪಂದಿಸಲು ನಾನಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಯ ನೀಡಿದ್ದಾರೆ.

ಗಣಪತಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಪರಮೇಶ್ವರ್ ಚರ್ಚೆ ನಡೆಸಿದರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರ್ದೈವದ ಸಂಗತಿ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ನಿಮ್ಮೊಂದಿಗೆ ನಾನಿದ್ದೇನೆ. ಯಾವುದೇ ಸಮಸ್ಯೆ ಇದ್ದರೂ ನನಗೆ ತಿಳಿಸಿ, ನಾನು ಅದಕ್ಕೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಗಣಪತಿಯವರ ಆರೋಪಗಳಿಗೆ ಅವರ ಹೇಳಿಕೆಯೊಂದನ್ನು ಬಿಟ್ಟು ಬೇರೆ ಆಧಾರಗಳಿಲ್ಲ. ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಸಿಐಡಿ ತನಿಖೆ ನಡೆಸಲಾಗುವುದು. ಅವರಿಗೆ ಇಲಾಖೆಯಿಂದ ಕಿರುಕುಳು ಆಗುತ್ತಿತ್ತೆ, ಮಾನಸಿಕ ಖಿನ್ನತೆ ಇತ್ತೆ ಅಥವಾ ಕೌಟುಂಬಿಕ ಸಮಸ್ಯೆಗಳು ಇದ್ದವೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಗಣಪತಿ ಅವರು ಹಿರಿಯ ಅಧಿಕಾರಿಗಳು ಹಾಗೂ ಸಚಿವರೊಬ್ಬರ ಹೆಸರನ್ನು ಮಾಧ್ಯಮದ ಮುಂದೆ ಹೇಳಿದ್ದಾರೆ. ಆದರೆ, ಆ ಹೇಳಿಕೆಯನ್ನು ಹೊರತು ಪಡಿಸಿ ಅವರ ಆರೋಪಗಳನ್ನು ದೃಢೀಕರಿಸುವಂತಹ ಯಾವುದೇ ಆಧಾರಗಳಿಲ್ಲ. ಆದರೂ ಸಿಐಡಿ ತನಿಖೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

ಇಲಾಖೆ ಅಧಿಕಾರಿಗಳ ಮೇಲೆ ಕಾರ್ಯ ಒತ್ತಡ ಹೆಚ್ಚಾಗಿದೆ. ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಎಂಬ ಆರೋಪಗಳಿವೆ. ಅಧಿಕಾರಿಗಳ ಒತ್ತಡ ನಿವಾರಣೆಗಾಗಿ ಮಾನಸಿಕ ರೋಗ ತಜ್ಞರ ನಿಯೋಜನೆ ಅಗತ್ಯವಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುವುದು. ಏನೇ ಆದರೂ ಎಂತಹದ್ದೇ ಸಂದರ್ಭ ಬಂದರೂ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಯಂತಹ ಹಾದಿ ತುಳಿಯಬೇಡಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಪರಮೇಶ್ವರ್ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು.

Comments are closed.