ಕರ್ನಾಟಕ

ಗಣಪತಿಗೆ ಕಿರುಕುಳ ನೀಡಿಲ್ಲ ಜಾರ್ಜ್ ಸ್ಪಷ್ಟನೆ

Pinterest LinkedIn Tumblr

k-j-georgeಬೆಂಗಳೂರು, ಜು.8: ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಗೃಹ ಸಚಿವನಾಗಿದ್ದಾಗ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಗಣಪತಿ ಆತ್ಮಹತ್ಯೆಗೂ ಮುನ್ನ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆ.ಜೆ.ಜಾರ್ಜ್ ಇಂದು ಬೆಂಗಳೂರಿನಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ವಿನಾಕಾರಣ ಈ ಪ್ರಕರಣದಲ್ಲಿ ತಮ್ಮನ್ನು ಎಳೆದುತರಲಾಗುತ್ತಿದೆ. ವಿರೋಧ ಪಕ್ಷಗಳು ನನ್ನನ್ನು ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿವೆ, ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರು ಗಣಪತಿ ಅವರನ್ನು ಅಮಾನತು ಮಾಡಿದ್ದರು. ಆಗ ಅವರು ತಮ್ಮನ್ನು ಭೇಟಿಯಾಗಿ ಅಮಾನತು ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದರೆ ತಾವು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷಪಡಿಸಿ ಹಿಂದಕ್ಕೆ ಕಳುಹಿಸಿದ್ದೆ. ಇದಾದ ಬಳಿಕ ಒಮ್ಮೆಯೂ ಅವರು ತಮ್ಮನ್ನು ಭೇಟಿಯಾಗಿಲ್ಲ. ಈ ಘಟನೆ ನಡೆದು ಎರಡೂವರೆ ವರ್ಷ ಆಗಿದೆ ಎಂದು ಹೇಳಿದರು.

ಇಲಾಖೆಯಲ್ಲಿ 1000ಕ್ಕೂ ಅಧಿಕ ಇನ್ಸ್‍ಪೆಕ್ಟರ್‍ಗಳಿದ್ದಾರೆ. ಎಲ್ಲರ ವೈಯಕ್ತಿಕ ಪರಿಚಯ ತಮಗಿಲ್ಲ. ಗಣಪತಿ ಅವರ ವೈಯಕ್ತಿಕ ಪರಿಚಯವೂ ನನಗಿರಲಿಲ್ಲ. ಅವರಿಗೆ ಕಿರುಕುಳ ನೀಡುವ ಪ್ರಶ್ನೆಯೆ ಇಲ್ಲಿ ಉದ್ಭವವಾಗುವುದಿಲ್ಲ. ಅದಕ್ಕೆ ಯಾವುದೇ ಸಾಕ್ಷ್ಯವೂ ಇಲ್ಲ. ವಿರೋಧ ಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ. ಸಚಿವನಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಅವರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ ಅವರು, ಈ ಬಗ್ಗೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿಯವರು ತಮ್ಮಿಂದ ಯಾವುದೇ ಮಾಹಿತಿ ಕೇಳಿಲ್ಲ. ಒಂದು ವೇಳೆ ಕೇಳಿದರೆ ಅವರಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Comments are closed.