ಜೋಧ್ಪುರ: ಕಿರಿಯ ವಿದ್ಯಾರ್ಥಿನಿಯನ್ನು ಬೆದರಿಸಿ ಬೆತ್ತಲೆಗೊಳ್ಳಿಸಿ ರ್ಯಾಗಿಂಗ್ ಮಾಡಿದ್ದಾರೆಂಬ ಆರೋಪದ ಮೇಲೆ ಐವರು ವಿದ್ಯಾರ್ಥಿನಿಯರ ವಿರುದ್ಧ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುವ ಘಟನೆಯೊಂದು ಜೋಧ್ಪುರದಲ್ಲಿ ನಡೆದಿದೆ.
ಕಿರಿಯ ವಿದ್ಯಾರ್ಥಿನಿಯೊಬ್ಬಳು ಶೌಚಾಲಯಕ್ಕೆ ತೆರಳಿದ್ದ ವೇಳೆ ಹಿರಿಯ ವಿದ್ಯಾರ್ಥಿನಿಯರು ರ್ಯಾಗಿಂಗ್ ಮಾಡಲು ಆರಂಭಿಸಿದ್ದು, ಬೆದರಿಕೆ ಹಾಕಿ ಆಕೆಯನ್ನು ಬೆತ್ತಲುಗೊಳಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಘಟನೆ ನಂತರ ಸಾಕಷ್ಟು ಹೆದರಿರುವ ವಿದ್ಯಾರ್ಥಿನಿ ಶಾಲೆಗೆ ಹೋಗಲು ಹೆದರುತ್ತಿದ್ದಾಳೆಂದು ಪ್ರತಾಪ್ ನಗರದ ಠಾಣಾಧಿಕಾರಿ ಮನೀಶ್ ದೇವ್ ಅವರು ಹೇಳಿದ್ದಾರೆ.
ಬಾಲಕಿ ಘಟನೆ ವಿವರಿಸಿದ ನಂತರ ಆಕೆಯ ಪೋಷಕರು ಶಾಲಾ ಆಡಳಿತ ಮಂಡಳಿಯ ಬಳಿ ಮಾತನಾಡಲು ಹೋದಾಗ, ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಕ್ರಮ ಕೈಗೊಳ್ಳದೆಯೇ, ಸತ್ಯವನ್ನು ಮುಚ್ಚಿಡಲು ಯತ್ನಿಸಿದ್ದಾರೆ. ಪ್ರಸ್ತುತ ವಿದ್ಯಾರ್ಥಿನಿಯರ ವಿರುದ್ಧ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಘಟನೆ ಬಳಿಕ ಆಗ್ರಹ ವ್ಯಕ್ತಪಡಿಸಿರುವ ಬಾಲಕಿಯ ಕುಟುಂಬಸ್ಥರು, ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಿದ್ದು, ರ್ಯಾಗಿಂಗ್ ವಿರೋಧಿ ಸಮತಿಯೊಂದನ್ನು ಪ್ರತೀ ಶಾಲೆಯಲ್ಲಿಯೂ ನೇಮಿಸುವಂತೆ ಮಾರ್ಗಸೂಚಿಯನ್ನು ನೀಡಬೇಕೆಂದು ಹೇಳಿದ್ದಾರೆ.
ನನ್ನ ಮಗಳು ಶಾಲೆಗೆ ಮೊದಲ ದಿನ ಹೋಗಿದ್ದಳು. ಆದರೆ, ಮೊದಲ ದಿನವೇ ಆಕೆ ಮಾನಸಿಕವಾಗಿ ದುರ್ಬಲವಾಗುವಂತೆ ಮಾಡಲಾಗಿದೆ. ಅಲ್ಲದೆ, ಕೆಟ್ಟ ಶಬ್ಧಗಳಿಂದ ಆಕೆಯನ್ನು ನಿಂದಿಸಲಾಗಿದೆ. ಘಟನೆ ಬಳಿಕ ಶಾಲೆ ನಮ್ಮೊಂದಿಗೆ ಸಹಕರಿಸುವುದನ್ನು ಬಿಟ್ಟು ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದೆ. ಕಿರುಕುಳ ನೀಡಿದ ವಿದ್ಯಾರ್ಥಿನಿಯರನ್ನು ಭೇಟಿಯಾಗಲು ನಮಗೆ ಅವಕಾಶ ನೀಡಲಿಲ್ಲ. ಹೀಗಾಗಿ ಪ್ರತಾಪ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಹೋಗಿದ್ದೆವು. ಪ್ರಸ್ತುತ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಬಾಲಕಿಯ ಪೋಷಕರು ಹೇಳಿಕೊಂಡಿದ್ದಾರೆ.
Comments are closed.