ಉಡುಪಿ: ನಮ್ಮಲ್ಲಿ ಚಲನಶಕ್ತಿ ಬಂದಾಗ ಮಾತ್ರ ನಾವು ಬೆಳೆಯಲು ಸಾಧ್ಯವಾಗುತ್ತದೆ. ಸಿದ್ಧಾಂತಗಳಿದ್ದರೂ ನಾವು ಕಾರ್ಯೋನ್ಮುಖರಾಗಿ ಕೃತಿಯಲ್ಲಿ ತೋರಿಸದಿದ್ದರೆ ಏನು ಪ್ರಯೋಜನ ವಿಲ್ಲ. ಸಾಧನೆಗೆ ಶ್ರದ್ಧೆ, ತಪಸ್ಸು ಮುಖ್ಯ. ಪ್ರತಿಭೆ ಇಲ್ಲದಿದ್ದರೂ ಶ್ರಮದಿಂದ ಯಾವುದೇ ಸಾಧನೆ ಮಾಡಲು ಆಗುತ್ತದೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಜಿ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಅವರು ಉಡುಪಿ ದೇವಾಡಿಗರ ಸೇವಾ ಸಂಘದ ಆಶ್ರಯದಲ್ಲಿ ಮುಂಬೈಯ ದೇವಾಡಿಗ ಸಂಘ, ಶ್ರೀಸತ್ಯನಾರಾಯಣ ಇಂಡಸ್ಟ್ರೀಯಲ್ ಸಪ್ಲಾಯರ್ಸ್, ದುಬೈ ಮತ್ತು ಶಾರ್ಜಾದ ಎಲಿಗೆಂಟ್ ಸಮೂಹ ಸಂಸ್ಥೆಗಳು, ಚಿಟ್ಪಾಡಿ ಶ್ರೀಏಕನಾಥೇಶ್ವರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಚಿಟ್ಪಾಡಿ ದೇವಾಡಿಗರ ಸಭಾಭವನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿದೇಶಗಳಲ್ಲಿ ವೃದ್ಧರ ಸಂಖ್ಯೆ ವೃದ್ಧಿಯಾಗುತ್ತಿದ್ದರೆ ಭಾರತದಲ್ಲಿ ಶೇ.೭೦ರಷ್ಟು ೩೫ವರ್ಷ ದೊಳಗಿನ ಯುವಕ ಇದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಇಡೀ ಜಗತ್ತಿಗೆ ಶಕ್ತಿ ತುಂಬುವ ಕಾರ್ಯವನ್ನು ಭಾರತ ಮಾಡಲಿದೆ. ಅದಕ್ಕಾಗಿ ಭಾರತೀಯ ಯುವ ಸಮುದಾಯ ಸಜ್ಜಾಗಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ದೇವಾಡಿಗರ ಸೇವಾ ಸಂಘದ ಅಧ್ಯಕ್ಷ ಕೆ.ಸೀತಾರಾಮ ದೇವಾಡಿಗ ವಹಿಸಿದ್ದರು. ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯವಾದಿ ವನಿತಾ ದೇವಾಡಿಗ, ಪಿಎಡ್‌ಡಿ ಪದವಿ ಪುರಸ್ಕೃತ ಡಾ.ದೀಪಾ ಪ್ರಭಾಕರ್, ಡಾ.ನಮ್ರತಾ ಅವರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದಲ್ಲಿ ಶೇ.೮೫ ಹಾಗೂ ಅಧಿಕ ಅಂಕ ಪಡೆದ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮ ಪಾಲ ಯು.ದೇವಾಡಿಗ, ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ವಾಸು ದೇವಾಡಿಗ, ಎಲಿಗೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ದಿನೇಶ್‌ಚಂದ್ರ ಶೇಖರ ದೇವಾಡಿಗ, ಶ್ರೀಏಕನಾಥೇಶ್ವರಿ ದೇವಸ್ಥಾನ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಸೊಸೈಟಿಯ ಅಧ್ಯಕ್ಷ ರತ್ನಾಕರ್ ಜಿ.ಎಸ್. ಭಾಗವಹಿಸಿದ್ದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಗಣೇಶ್ ದೇವಾಡಿಗ ಸ್ವಾಗತಿಸಿದರು. ಮೋಹನ್‌ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಶೇರಿ ಗಾರ್ ಹಾಗೂ ಶ್ಯಾಮಲಾ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.
Comments are closed.