ಬೆಂಗಳೂರು: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಒಂಬತ್ತು ಮಂದಿ ಗಾಯಗೊಂಡಿರುವ
ಘಟನೆ ಭಾನುವಾರ ಸಂಜೆ ನಗರದ ಹೊರ ವಲಯದ ನೈಸ್ ರಸ್ತೆಯಲ್ಲಿ ನಡೆದಿದೆ.
ಗಿರಿನಗರದ ನಿವಾಸಿ ಪ್ರಶಾಂತ್ (40), ಆವಲಹಳ್ಳಿ ನಿವಾಸಿ ಮುರುಳಿ ಹಾಗೂ ಮುರುಳಿ ಅವರ ಮಗ ಶಶಾಂಕ್ (2) ಮೃತ ದುರ್ದೈವಿಗಳು. ಪ್ರಶಾಂತ್ ಅವರು ಇತ್ತಿಚೆಗೆ ಸ್ವಿಫ್ಟ್ ಕಾರು ಖರೀದಿಸಿದ್ದು, ಕಾರಿಗೆ ಪೂಜೆ ಮಾಡಿಸುವ ಸಲುವಾಗಿ ತಮ್ಮ ಕುಟುಂಬ ಸದಸ್ಯರಾದ ಪ್ರಜ್ವಲ್ ಹಾಗೂ ಗಂಗಾಧರ್ ಜತೆ ಸಾತನೂರಿನ ಕಬ್ಟಾಳಮ್ಮ ದೇವಿಯ ದೇವಸ್ಥಾನಕ್ಕೆ ತೆರಳಿದ್ದರು. ಕಾರನ್ನು ಪ್ರಜ್ವಲ್ ಚಾಲನೆ ಮಾಡುತ್ತಿದ್ದರು.
ಪೂಜೆ ಮುಗಿಸಿಕೊಂಡು ಗಿರಿನಗರಕ್ಕೆ ಕುಟುಂಬದೊಂದಿಗೆ ವಾಪಸ್ ಆಗುತ್ತಿದ್ದ ವೇಳೆ ನೈಸ್ ರಸ್ತೆಯ ಆರ್ಮುಗಂ ದೇವಸ್ಥಾನದ ಬಳಿ ಕಾರಿನ ಮೇಲೆ
ನಿಯಂತ್ರಣ ಕಳೆದುಕೊಂಡ ಚಾಲಕ ಪ್ರಜ್ವಲ… ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಬಳಿಕ ಈ ಕಾರು ಅವಲಹಳ್ಳಿಯಿಂದ ಮೈಸೂರು ರಸ್ತೆ ಬಳಿಯಿರುವ ರಾಮೋಹಳ್ಳಿ ಕಡೆ ತೆರಳುತ್ತಿದ್ದ ಓಮ್ನಿ ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಓಮ್ನಿ ಕಾರಿನಲ್ಲಿದ್ದ ಮುರುಳಿ ಹಾಗೂ ಅವರ 2 ವರ್ಷದ ಪುತ್ರ ಶಶಾಂಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ಸ್ವಿಫ್ಟ್ ಕಾರಿನಲ್ಲಿದ್ದ ಪ್ರಶಾಂತ್ ಕೂಡ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಪ್ರಜ್ವಲ್ ಹಾಗೂ ಗಂಗಾಧರ್ ಹಾಗೂ ಓಮ್ನಿಯಲ್ಲಿದ್ದ ನಾಗರಾಜ್, ಮಂಜುಳಾ, ಪ್ರೀತಮ…, ಪ್ರಿಯಾ, ಪ್ರೀತಿ ಹಾಗೂ ಶಿವಮೂರ್ತಿ ಗಂಭೀರ ಗಾಯಗೊಂಡಿದ್ದು, ನಾಗರಬಾವಿಯ ಪೆನಿಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಓಮ್ನಿ ಕಾರಿನಲ್ಲಿದ್ದವರು ಎಲ್ಲಿಗೆ ಹೋಗಿದ್ದರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸ್ವಿಫ್ಟ್ ಕಾರು ಚಾಲಕ ವೇಗವಾಗಿ ಚಾಲನೆ ಮಾಡುತ್ತಿದ್ದುದೇ ಅಪಘಾತ ಸಂಭವಿಸಲು ಕಾರಣವಿರಬಹುದು ಎಂದು ಪೊಲೀಸರು
ಶಂಕೆ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಿಫ್ಟ್ ಕಾರಿನಲ್ಲಿದ್ದವರು ಮದ್ಯ ಸೇವನೆ ಮಾಡಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
-ಉದಯವಾಣಿ
Comments are closed.