ಫಸ್ಟ್ Rank ರಾಜು’ ಚಿತ್ರತಂಡ ಮತ್ತೆ ಜೊತೆಯಾಗಿ ಸಿನಿಮಾ ಮಾಡುತ್ತಿರುವ ವಿಷಯ, ಆ ಚಿತ್ರದಲ್ಲಿ “ರಂಗಿತರಂಗ’ ಚಿತ್ರದ ನಾಯಕಿ ಅವಂತಿಕಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ. ಆದರೆ, ಚಿತ್ರಕ್ಕೆ ಟೈಟಲ್ ಆಗಿರಲಿಲ್ಲ. ಸಹಜವಾಗಿಯೇ ಯಶಸ್ವಿ ತಂಡವೊಂದು ಒಂದಾಗಿರುವುದರಿಂದ ಚಿತ್ರದ ಟೈಟಲ್ ಏನಿರಬಹುದೆಂಬ ಕುತೂಹಲ ಅನೇಕರಿಗಿತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ.
ಚಿತ್ರಕ್ಕೆ “ರಾಜು ರಂಗಿತರಂಗ’ ಎಂಬ ಟೈಟಲ್ ಇಡಲಾಗಿದೆ. ಏನಿದು ಟೈಟಲ್ ಈ ಥರಾ ಇದೆ, ಯಾಕಾಗಿ ಈ ರೀತಿ ಇಟ್ಟಿದ್ದಾರೆಂದು ನೀವು ಕೇಳಬಹುದು. ನಿಮಗೆ ಗೊತ್ತಿರುವಂತೆ “ಫಸ್ಟ್ Rank ರಾಜು’ ಚಿತ್ರದ ನಿರ್ದೇಶಕ ನರೇಶ್, ನಾಯಕ ಗುರುನಂದನ್ ಹಾಗೂ ತಾಂತ್ರಿಕ ವರ್ಗ ಈ ಸಿನಿಮಾದಲ್ಲಿ ಮತ್ತೆ ಒಟ್ಟಾಗಿದೆ. ಇದು ಯಶಸ್ವಿ ತಂಡವೆಂದು ಈಗಾಗಲೇ ಸಾಬೀತಾಗಿದೆ ಕೂಡಾ. ಇನ್ನು ನಾಯಕಿಯಾಗಿ “ರಂಗಿತರಂಗ’ ಅವಂತಿಕಾ ಶೆಟ್ಟಿ ಇದ್ದಾರೆ.
ಈ ಚಿತ್ರ ಕೂಡಾ ಕಳೆದ ವರ್ಷದ ಹಿಟ್ ಸಿನಿಮಾ. ಎರಡು ಜೋಡಿಗಳು ಒಂದಾಗಿರುವ ಕಾರಣ ಚಿತ್ರಕ್ಕೆ “ರಾಜು ರಂಗಿತರಂಗ’ ಎಂದು ಹೆಸರಿಡಲಾಗಿದೆ. ಅಂದಹಾಗೆ ಚಿತ್ರಕ್ಕೆ “ಫಸ್ಟ್ Rank ಅಲ್ಲ, ಸೆಕೆಂಡ್ Ranku ಅಲ್ಲ…’ ಎಂಬ ಟ್ಯಾಗ್ಲೈನ್ ಇದೆ. ಅಲ್ಲಿಗೆ ಇದು “ಫಸ್ಟ್ Rank ರಾಜು’ವಿನ ಅಥವಾ “ರಂಗಿತರಂಗ’ದ ಮುಂದುವರೆದ ಭಾಗವೇ ಎಂಬ ಕುತೂಹಲಕ್ಕೂ ತೆರೆಬಿದ್ದಂತಾಗಿದೆ. ಈ ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸುತ್ತಿದ್ದಾರೆ.
-ಉದಯವಾಣಿ
Comments are closed.