ಬೆಂಗಳೂರು, ಜು. ೧೯- ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಬೀದಿಗೆ ಬಿದ್ದಿದೆ. ಒಂದೆಡೆ ಈ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಸಂಸದರು ದೆಹಲಿಯ ಸಂಸತ್ ಭವನದ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರೆ, ಕಾಂಗ್ರೆಸ್ ನಾಯಕರು ಸತ್ಯಾಸತ್ಯತೆಯನ್ನು ಮನವರಿಕೆ ಮಾಡಲು ಜನರ ಬಳಿ ತೆರಳಲು ಮುಂದಾಗಿದ್ದಾರೆ.
ಹೀಗಾಗಿ ಮಳೆ ನಿಂತರು ಮಳೆಯ ಹನಿ ನಿಲ್ಲಲಿಲ್ಲ ಎಂಬಂತೆ ಈ ಪ್ರಕರಣದ ಸಂಬಂಧ ಸಚಿವ ಜಾರ್ಜ್ರವರ ತಲೆದಂಡವಾಗಿದ್ದರೂ ಹೋರಾಟ ಮಾತ್ರ ತಾರ್ಕಿಕ ಅಂತ್ಯ ಕಾಣದಂತಾಗಿದೆ.
ದೆಹಲಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು, ಸಿಬಿಐ ತನಿಖೆಗೆ ಒಪ್ಪಿಸುವವರೆಗೂ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದರು. ಜಿಲ್ಲಾ ಘಟಕಗಳ ವತಿಯಿಂದಲೂ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಹೇಳಿದರು.
ಯಡಿಯೂರಪ್ಪ ಘೋಷಿಸಿದ ಬೆನ್ನ ಹಿಂದೆಯೇ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ರವರು ರಾಜಕೀಯ ದುರುದ್ದೇಶಕ್ಕೆ ಗಣಪತಿ ಹತ್ಯೆ ಪ್ರಕರಣವನ್ನು ಪ್ರತಿಪಕ್ಷಗಳು ದುರುಪಯೋಗಿಸಿಕೊಳ್ಳಲಾಗಿದೆ ಎಂದು ಕಿಡಿ ಕಾರಿದರು.
Comments are closed.