ನವದೆಹಲಿ: ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ವೈದ್ಯರು ವೈದ್ಯಕೀಯವಾಗಿ ಅರ್ಹತೆ ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ.
‘ಹೆಲ್ತ್ ವರ್ಕ್ ಫೋರ್ಸ್ ಇನ್ ಇಂಡಿಯಾ’ ಎಂದು ವರದಿಗೆ ಹೆಸರು ನೀಡಲಾಗಿದ್ದು, 2001ರಲ್ಲಿ ಅಲೋಪತಿ ವೈದ್ಯರೆಂದು ಗುರುತಿಸಿಕೊಂಡ ಶೇಕಡಾ 31ರಷ್ಟು ಮಂದಿ ಹತ್ತನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಇನ್ನು ಶೇಕಡಾ 57 ರಷ್ಟು ಮಂದಿ ವೈದ್ಯಕೀಯ ಅರ್ಹತೆಯನ್ನೇ ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಗ್ರಾಮೀಣ ಪ್ರದೇಶಗಳಲ್ಲಿರುವ ಶೇಕಡಾ 18ರಷ್ಟು ಮಂದಿ ಅಲೋಪತಿ ವೈದ್ಯರು ವೈದ್ಯಕೀಯ ಅರ್ಹತೆಯನ್ನು ಪಡೆದಿದ್ದಾರೆ.
2001ರಲ್ಲಿ ನಡೆದ ಜನಗಣತಿ ಸಂದರ್ಭದಲ್ಲಿ ಎಲ್ಲಾ ಜಿಲ್ಲೆಗಳಿಂದ ಸಂಗ್ರಹಿಸಿದ ದಾಖಲೆಗಳ ಆಧಾರದ ಮೇಲೆ ಈ ಅಧ್ಯಯನ ಕೈಗೊಳ್ಳಲಾಗಿದ್ದು, ನಮ್ಮ ದೇಶದಲ್ಲಿ ಶೇಕಡಾ 60ರಷ್ಟು ಆಯುರ್ವೇದ ವೈದ್ಯರು, ಶೇಕಡಾ 46ರಷ್ಟು ಯುನಾನಿ ವೈದ್ಯರು,ಶೇಕಡಾ 42ರಷ್ಟು ಹೋಮಿಯೋಪತಿ ವೈದ್ಯರು ಮತ್ತು ಶೇಕಡಾ 42.3 ರಷ್ಟು ದಂತ ವೈದ್ಯರು ವೈದ್ಯಕೀಯ ಅರ್ಹತೆ ಹೊಂದಿದ್ದಾರೆ.
ಆರೋಗ್ಯ ವಲಯದಲ್ಲಿ ಮಹಿಳೆಯರು ಪುರುಷರಿಗಿಂತ ಉತ್ತಮ ಶಿಕ್ಷಣವಂತರಾಗಿರುತ್ತಾರೆ. ಶೇಕಡಾ 67ರಷ್ಟು ಮಂದಿ ಮಹಿಳೆಯರು ವೈದ್ಯಕೀಯ ಅರ್ಹತೆ ಪಡೆದಿದ್ದು, ಶೇಕಡಾ 38ರಷ್ಟು ಪುರುಷರು ಇದ್ದಾರೆ.
ಭಾರತದಲ್ಲಿ ಈಗಾಗಲೇ ವೈದ್ಯರು ಮತ್ತು ರೋಗಿಗಳ ಅನುಪಾತದಲ್ಲಿ ಭಾರೀ ವ್ಯತ್ಯಾಸವಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ಪ್ರತಿ ಲಕ್ಷ ಜನರಿಗೆ 80 ವೈದ್ಯರಿಂದ ಪ್ರತಿ ಲಕ್ಷ ಜನರಿಗೆ 36 ವೈದ್ಯರುಗಳಿಗೆ ಸಂಖ್ಯೆ ಇಳಿಮುಖವಾಗುತ್ತದೆ.
Comments are closed.