ಕರ್ನಾಟಕ

ವಿಜಯನಗರ ಪಿಎಸ್‍ಐ ರೂಪಾ ಆತ್ಮಹತ್ಯೆಗೆ ಯತ್ನಿಸಿರುದಕ್ಕೆ ಕಾರಣ ಇಲ್ಲಿದೆ….

Pinterest LinkedIn Tumblr

roopa

ಬೆಂಗಳೂರು: ವಿಜಯನಗರ ಠಾಣೆಯ ಪಿಎಸ್‍ಐ ರೂಪಾ ತಂಬದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ರಾಜಾಜಿನಗರದ ಸುಗುಣಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಏನು ಎನ್ನುವುದನ್ನು ಯಾರು ಅಧಿಕೃತವಾಗಿ ತಿಳಿಸದೇ ಇದ್ದರೂ ವಿಜಯನಗರ ಠಾಣೆಯ ಇನ್ಸ್ ಪೆಕ್ಟರ್ ಜೊತೆಗಿನ ಮನಸ್ತಾಪಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಮೋಟು ಕೊಲೆ ಪ್ರಕರಣದಲ್ಲಿ ವಿಜಯನಗರ ಠಾಣೆಯ ಇನ್ಸ್ ಪೆಕ್ಟರ್ ಸಂಜೀವ್ ಗೌಡ ಅಮಾನತಾಗಿದ್ದರು. ಅಮಾನತುಗೊಂಡಿದ್ದರೂ ಮತ್ತೆ ಠಾಣೆಗೆ ಸಂಜೀವ್ ಗೌಡ ಬರುತ್ತಿದ್ದರು. ಅಲ್ಲದೇ ಬೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಪಿಎಸ್‍ಐ ರೂಪಾರಿಗೆ ಇನ್ಸ್ ಪೆಕ್ಟರ್ ಬೈದಿದ್ದರು. ಅಷ್ಟೇ ಅಲ್ಲದೇ ಸ್ಟೇಷನ್ ಡೈರಿಯಲ್ಲಿ ರೂಪಾರ ವರ್ತನೆ ಸರಿ ಇಲ್ಲ, ಕರ್ತವ್ಯಲೋಪವೆಸಗಿದ್ದಾರೆಂದು ಸಂಜೀವ್ ಗೌಡ ನಮೂದಿಸಿದ್ದರು. ಈ ಘಟನೆಯ ಬಳಿಕ ಬಳಿಕ ಪಿಎಸ್‍ಐ ರೂಪ ಎರಡು ದಿನ ಕೆಲಸಕ್ಕೆ ಗೈರಾಗಿದ್ದರು. ಡೈರಿಯಲ್ಲಿ ನಮೂದಿಸಿದ್ದರಿಂದ ಇಲಾಖೆಯಲ್ಲಿ ನನ್ನ ಕೆಲಸದ ಮೇಲೆ ಕಪ್ಪುಚುಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ನೊಂದಿದ್ದರು.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಈ ದೂರನ್ನು ರೂಪಾ ಸ್ವೀಕರಿಸಲಿಲ್ಲ. ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಮಹಿಳೆ ಪೊಲೀಸ್ ಠಾಣೆಯಲ್ಲಿ ಕೂಗಾಡಿದ್ದರು. ಈ ವೇಳೆ ಸಂಜೀವ್ ಗೌಡ ರೂಪಾರಲ್ಲಿ ದೂರು ಸ್ವೀಕರಿಸುವಂತೆ ಹೇಳಿದ್ದಾರೆ. ಇದಕ್ಕೆ ರೂಪಾ ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವೆ ವಾದ ವಿವಾದ ನಡೆದಿದೆ. ಕೊನೆಗೆ ರೂಪಾ ಸಂಜೀವ್ ಗೌಡರ ವಿರುದ್ಧ ಪೊಲೀಸ್ ಆಯುಕ್ತರಲ್ಲಿ ದೂರು ನೀಡಲು ಮುಂದಾಗಿದ್ದರು.

ಮಧ್ಯಾಹ್ನ 1 ಗಂಟೆಯ ಸುಮಾರಿಗ ಈ ಘಟನೆ ನಡೆದಿದ್ದು, ಪೊಲೀಸ್ ಸಿಬ್ಬಂದಿ ರೂಪಾರನ್ನು ಸಮಾಧಾನ ಮಾಡಿದ್ದಾರೆ. ಇದಾದ ಬಳಿಕ ರೂಪಾ ‘ಇಲ್ಲಿ ಏನಾದ್ರೂ ಸಮಸ್ಯೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ’ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸಮಾಧಾನಗೊಳ್ಳದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ರೂಪಾ ಅವರ ಪತಿ ನಟರಾಜ್ ಅವರಿಗೆ ಫೋನ್ ಮಾಡಿ ನಿಮ್ಮ ಪತ್ನಿ ಸಿಟ್ಟಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಪತ್ನಿಯನ್ನು ಮನೆಗೆ ಬರುವಂತೆ ಹೇಳಿ ಎಂದು ಸಿಬ್ಬಂದಿಗೆ ಪತಿ ತಿಳಿಸಿದ್ದಾರೆ. ಇದಕ್ಕೆ ರೂಪಾ ಪತಿಗೆ ಕರೆ ಮಾಡಿ ಪೊಲೀಸ್ ಆಯುಕ್ತರ ಕಚೇರಿಗೆ ಬನ್ನಿ ಎಂದು ಹೇಳಿ ಅಲ್ಲೇ ಜಗಳವಾಡಿಕೊಂಡಿದ್ದಾರೆ. ನಂತರ ಸ್ಕೂಟಿಯಲ್ಲಿ ನೇರವಾಗಿ ಮನೆಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಸಿಬ್ಬಂದಿ ಓಲಾ ಕ್ಯಾಬಿನಲ್ಲಿ ತೆರಳಿ ಎಂದು ವಿನಂತಿಸಿದಾಗ ಕಾರಿನಲ್ಲಿ ನಾನು ಹೋಗಲ್ಲ ಎಂದು ಹೇಳಿ ಸ್ಕೂಟಿಯಲ್ಲೇ ರಾಜಾಜಿನಗರದ ಮನೆಗೆ ತೆರಳಿದ್ದಾರೆ. ಮನೆಗೆ ತೆರಳಿದ ಬಳಿಕ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನಟರಾಜ್ ರೂಪಾ ಅವರನ್ನು ಕೂಡಲೇ ರಾಜಾಜಿನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅಸ್ವಸ್ಥಗೊಂಡಿದ್ದ ಪಿಎಸ್‍ಐ ರೂಪಾ ಅವರು ಚಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಹೇಳಿದ್ದಾರೆ.

Comments are closed.