ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಹಿಯನ್ನು ನಕಲಿ ಮಾಡಿದ್ದ ಜಾರ್ಖಂಡ್ ಮೂಲದ ಇಬ್ಬರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.
ಮುಂಬರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸುವಂತೆ ಬರೆದ ಪತ್ರಕ್ಕೆ ಮೋದಿ ಅವರ ನಕಲಿ ಸಹಿಯನ್ನು ಮಾಡಿ ಕಳುಹಿಸಲಾಗಿತ್ತು. ಈ ಸಂಬಂಧ ಜಾರ್ಖಂಡ್ ನಿವಾಸಿಗಳಾದ ಪಂಡಿತ್ ಸ್ವರಾಜ್ ಕುಮಾರ್ ರಾಯ್ ಮತ್ತು ಸುವೇಂದು ಕುಮಾರ್ ಬರ್ಮಾನ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಜುಲೈ 27 ರವರೆಗೂ ಸಿಬಿಐ ವಶಕ್ಕೆ ನೀಡಲಾಗಿದೆ.
ಮೇ 2015 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನಕಲಿ ಸಹಿಯನ್ನು ಮಾಡಿದ್ದ ಪತ್ರದಲ್ಲಿ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸುವಂತೆ ಪತ್ರ ಬರೆಯಲಾಗಿತ್ತು, ಈ ಪತ್ರ ಪ್ರಧಾನ ಮಂತ್ರಿಗಳ ಕಚೇರಿಗೆ ತಲುಪಿತ್ತು. ಮೋದಿ ಅವರು ಈ ರೀತಿಯ ಯಾವುದೇ ಸಂವಹನ ನಡೆಸಿಲ್ಲ ಎಂದು ತಿಳಿದು ಬಂದ ಮೇಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಯಿತು. ಪ್ರಾಥಮಿಕ ತನಿಖೆ ನಡೆಸಿದ ಸಿಬಿಐ ಕೇಸು ದಾಖಲಿಸಿತು.
ಈ ಸಂಬಂಧ ಜಾರ್ಖಂಡ್ ನ ಬೊಕಾರೋ ಸ್ಟೀಲ್ ಸಿಟಿ ಮತ್ತು ಪಶ್ಚಿಮ ಬಂಗಾಳದ ಬಿಶನ್ ಪುರ್ ಜಿಲ್ಲೆಯ ಬಂಪುರ್ ನಲ್ಲಿ ಪರಿಶೀಲನೆ ನಡೆಸಲವಾಯಿತು. ಈ ವೇಳೆ ಆರೋಪಿಗಳ ಬಳಿ ಫೋರ್ಜರಿ ಮಾಡಿದ್ದ ಹಲವು ದಾಖಲೆಗಳು ಹಾಗೂ ಮೋದಿ ಅವರ ನಕಲಿ ಸಹಿ ಮಾಡಿದ್ದ ಕಾಗದ ಪತ್ರಗಳು ಇದ್ದು, ಅವುಗಳನ್ನೆಲ್ಲಾ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
Comments are closed.