ಅಂತರಾಷ್ಟ್ರೀಯ

ಈಗ ಎಲ್ಲದಕ್ಕೂ ಆ್ಯಪ್; ಅಯ್ಯೋ “ಅದನ್ನು ಎತ್ತಲು’ ಒಂದು app ಬಂದಿದೆ!

Pinterest LinkedIn Tumblr

Pooper appನ್ಯೂಯಾರ್ಕ್‌ : ನೀವು ತುಂಬಾ ಮುದ್ದಾಡುವ ನಿಮ್ಮ ಅಚ್ಚುಮೆಚ್ಚಿನ ನಾಯಿಯ ಮಲವನ್ನು ತೆಗೆದು ಸ್ವಚ್ಚಗೊಳಿಸುವ ಕೆಲಸ ನಿಮಗೆ ಸಾಕಾಗಿ ಹೋಗಿದೆಯೇ ? ಹಾಗಿದ್ದರೆ ನೀವಿನ್ನು ಚಿಂತಿಸಬೇಕಾಗಿಲ್ಲ ! ಈಗ ನಿಮಗಾಗಿ ಹಾಗೂ ನಿಮ್ಮ ಮುದ್ದಿನ ನಾಯಿಯ ಸೇವೆಗಾಗಿ ‘ಸೂಕ್ತ ಆಸಕ್ತರನ್ನು’ ಒದಗಿಸುವ ವಿಶ್ವದ ಪ್ರಪ್ರಥಮ ಪೂಪರ್‌ ಆ್ಯಪ್‌ ಅನ್ನು ಬುದ್ಧಿವಂತರಲ್ಲಿ ಮಹಾ ಬುದ್ಧಿವಂತರೆನಿಸಿಕೊಂಡ ಕೆಲವರು ಸೃಷ್ಟಿಸಿದ್ದಾರೆ.

ವಿಶೇಷವೆಂದರೆ ಈ ಆ್ಯಪ್‌ ನಲ್ಲಿ ಎರಡು ಅವಕಾಶಗಳನ್ನು ನಿಮ್ಮ ಮುಂದೆ ಇಡಲಾಗಿದೆ. ಮೊದಲನೇಯದು ನಿಮ್ಮ ನಾಯಿಯ ಮಲವನ್ನು ತೆಗೆದು ಸ್ವಚ್ಛಗೊಳಿಸಿ ಅದನ್ನು ಪರಿಸರ ಸ್ನೇಹಿ ಚೀಲದಲ್ಲಿ ಒಯ್ದು ವಿಲೇವಾರಿ ಮಾಡುವ ಸ್ಕೂಪಿಂಗ್‌ ಸೇವೆ ಒದಗಿಸುವವರನ್ನು ಪೂರೈಸುವುದು; ಎರಡನೇಯದು ಇಂತಹ ಕೆಲಸವನ್ನು ಪೂರ್ಣಕಾಲಿಕವಾಗಿ ಅಥವಾ ಅಂಶಕಾಲಿಕವಾಗಿ, ಒಳ್ಳೆಯ ಸಂಪಾದನೆಗಾಗಿ, ನೀವೇ ಕೈಗೊಳ್ಳಬಯಸುವುದಾದರೆ ನಿಮ್ಮನೇ ನೀವು ಸ್ಕೂಪರ್‌ ಆಗಿ ನೋಂದಾಯಿಸಿಕೊಳ್ಳುವುದು !

ಈ ಎಲ್ಲ ಕೆಲಸಗಳನ್ನು ನೀವು ನಿಮ್ಮ ಸ್ಮಾರ್ಟ್‌ ಫೋನ್‌ ಮೂಲಕವೇ ಮಾಡಬಹುದಾಗಿದೆ. ನೀವು ಉಬರ್‌ ಅಥವಾ ಓಲಾ ಕ್ಯಾಬನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ ಹಾಗೆ ! ಆ್ಯಪ್‌ನಲ್ಲಿರುವ ನಿಗದಿತ ದರಗಳನ್ನು ಒಪ್ಪಿಕೊಂಡು ನೀವು ಸ್ಕೂಪಿಂಗ್‌ ರಿಕ್ವೆಸ್ಟ್‌ ಸಲ್ಲಿಸಿದರೆ ನೀವು ಗೊತ್ತುಪಡಿಸಿದ ತಾಣಕ್ಕೇ ಸ್ಕೂಪರ್‌ಗಳು ಬಂದು ನಿಮಗೆ ಮತ್ತು ನಿಮ್ಮ ಮುದ್ದಿನ ನಾಯಿಗೆ ಸೇವೆ ಸಲ್ಲಿಸುತ್ತಾರೆ. ಒಂದು ವೇಳೆ ಹಣ ಸಂಪಾದನೆಗಾಗಿ ನೀವೇ ಸ್ಕೂಪರ್‌ ಆಗುವುದಾದರೆ ನೀವು ಸ್ಕೂಪಿಂಗ್‌ ಸೇವೆ ಸಲ್ಲಿಸಬೇಕಾದ ತಾಣಗಳನ್ನು ನಿಮಗೆ ತಿಳಿಸಲಾಗುತ್ತದೆ.

ದಿನಕ್ಕೆ ಎರಡು ಸರ್ತಿ ನಡೆಸುವ ಸ್ಕೂಪಿಂಗ್‌ ಗೆ ತಿಂಗಳ ಶುಲ್ಕ 15 ಡಾಲರ್‌. ದಿನಕ್ಕೆ ಮೂರು ಸರ್ತಿ ಅಥವಾ ದಿನಕ್ಕೆ ಅನ್‌ಲಿಮಿಟೆಡ್‌ ಆಗಿ ನಡೆಸುವ ಸ್ಕೂಪಿಂಗ್‌ ಕೆಲಸದ ಶುಲ್ಕ ಅನುಕ್ರಮವಾಗಿ ತಿಂಗಳಿಗೆ 25 ಡಾಲರ್‌ ಮತ್ತು 35 ಡಾಲರ್‌ ! ಜತೆಗೆ ನಿಮಗೆ ನಾಯಿಯ ಮಲವನ್ನು ಸಂಗ್ರಹಿಸುವ ಶೇ.100 ಜಿಂಓ ಫ್ರೀ ಎಂಬ ಬ್ಯಾಗ್‌ ಕೂಡ ನೀಡಲಾಗುತ್ತದೆ.

ಹಾಗಿದ್ದರೆ ಇನ್ನೇಕೆ ತಡ ? ನಿಮ್ಮ ಮುದ್ದಿನ ನಾಯಿಯ ಮಲವನ್ನು ನೀವಿನ್ನು ಖುದ್ದಾಗಿ ಎತ್ತಬೇಕಾಗಿಲ್ಲ; ಅಥವಾ ನೀವು ಹೆಚ್ಚುವರಿ ಹಣ ಸಂಪಾದಿಸಲು ಬಯಸುವುದಾದರೆ ಬೇರೆಯವರ ಮುದ್ದಿನ ನಾಯಿ ಮಲ ಸಂಗ್ರಹಿಸುವ ಉದ್ಯೋಗಕ್ಕೆ ಮುಂದಾಗುವುದು ಕೂಡ ಸುಲಭ – ಅದುವೇ ಪೂಪರ್‌ ಆ್ಯಪ್‌ ನ ವಿಶೇಷ !

ಪೂಪರ್‌ ಆ್ಯಪ್‌ನ subscriber ಬಟನ್‌ ಕ್ಲಿಕ್‌ ಮಾಡಿದಾಗ ನಿಮ್ಮನ್ನು ಅದು ಮೊತ್ತ ಮೊದಲಾಗಿ ನಿಮ್ಮ ಇ-ಮೇಲ್‌ ವಿಳಾಸ ದಾಖಲಿಸಬೇಕಾದ ಪುಟಕ್ಕೆ ಒಯ್ಯುತ್ತದೆ. ನೀವು ನಿಮ್ಮ ಇ-ಮೇಲ್‌ ವಿಳಾಸವನ್ನು ದಾಖಲಿಸಿದ ಬಳಿಕ “ಈ ಪೂಪರ್‌ ಆ್ಯಪ್‌ ಸದ್ಯಕ್ಕೆ ಸಾನ್‌ ಫ್ರಾನ್ಸಿಸ್ಕೋ, ನ್ಯೂಯಾರ್ಕ್‌ ಮತ್ತು ಲಾಸ್‌ ಏಂಜಲಿಸ್‌ ನಲ್ಲಿ ಪ್ರಾಯೋಗಿಕ ಪರೀಕ್ಷೆಯಲ್ಲಿದೆ’ ಎಂಬುದು ನಿಮಗೆ ಗೊತ್ತಾಗುತ್ತದೆ. ಅಲ್ಲಿಯ ನಂತರದ ಸಂಗತಿಗಳು ನಿಮಗೆ ಚೋದ್ಯದ ವಿಷಯಗಳಾಗಿ ಕಂಡು ಬರುತ್ತವೆ !

ಇಷ್ಟಕ್ಕೂ ನಿಮಗೆ ಒಂದು ಮಾತನ್ನು ಹೇಳಲೇಬೇಕು – ಈ ಪೂಪರ್‌ ಆ್ಯಪ್‌ ಎನ್ನುವುದು ಕೇವಲ ಒಂದು ಜೋಕ್‌ ಗಾಗಿ ಬುದ್ಧಿವಂತರಲ್ಲಿ ಮಹಾಬುದ್ಧಿವಂತರು, ಬೇರೆಯವರನ್ನು ಮಂಗ ಮಾಡಲೆಂಬಂತೆ ಮಾಡಿರುವ ಆ್ಯಪ್‌ ಆಗಿದೆ.

ಯಾರಿಗಾದರೂ ಇದರಿಂದ ಏನಾದರೂ ಪ್ರಯೋಜನವಾಗುವುದೋ ಇಲ್ಲವೋ – ಒಟ್ಟಿನಲ್ಲಿ ಈ ಆ್ಯಪ್‌ ಮಾಡಿದವರಿಗೆ ಅಸಂಖ್ಯಾತ ಅಮಾಯಕ ವ್ಯಕ್ತಿಗಳ ಇ-ಮೇಲ್‌ ವಿಳಾಸಗಳನ್ನು ಬಾಚಿಕೊಳ್ಳುವ ಅವಕಾಶವಂತೂ ಸಿಗುತ್ತದೆ. ಅದರ ಹಿಂದಿನ ಉದ್ದೇಶ – ದುರುದ್ದೇಶಗಳು ಏನಿವೆಯೋ ದೇವರೇ ಬಲ್ಲ !
-ಉದಯವಾಣಿ

Comments are closed.