ಮೈಸೂರು: ಇತಿಹಾಸ ಪ್ರಸಿದ್ಧ ಮೈಸೂರಿನ ಚಾಮುಂಡೇಶ್ವರಿ ದೇವಿಯ ವರ್ಧಂತ್ಯುತ್ಸವ ಕಣ್ತುಂಬಿಕೊಳ್ಳಲು ನಾಡಿನ ವಿವಿಧೆಡೆಗಳಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡೆ ಹರಿದು ಬಂದಿತ್ತು.
ದೇಗುದಲ್ಲಿ ಬೆಳಗಿನ ಜಾವ 4ರಿಂದ 7 ಗಂಟೆವರೆಗೆ ದೇವಿಗೆ ಅಭ್ಯಂಜನ ಸ್ನಾನ, ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಸಹಸ್ರನಾಮ ಮತ್ತು ಮಂಗಳಾ ರತಿ ಪೂಜಾವಿಧಿಗಳು ಜರುಗಿದವು. ದುರ್ಗಾಂಲಕಾರದಲ್ಲಿ ದೇವಿಯ ಮೂರ್ತಿ ಕಂಗೊಳಿಸುತ್ತಿತ್ತು. ಸೇವಂತಿಗೆ, ಮರುಗ, ಜಾಜಿ, ಮಲ್ಲಿಗೆ ಹೂವುಗಳಿಂದ ದೇವಿಯನ್ನು ಅಲಂಕರಿಸಲಾಗಿತ್ತು. ದಟ್ಟನೀಲಿ, ಕೆಂಪು, ಕೇಸರಿ, ಹಳದಿ, ಶ್ವೇತವರ್ಣದ ವಿವಿಧ ಹೂವಿನ ಹಾರಗಳಿಂದ ಗರ್ಭಗುಡಿಯ ಸಭಾಂಗಣವನ್ನು ಸಿಂಗರಿಸಲಾಗಿತ್ತು.
ಬೆಳಿಗ್ಗೆ 10 ಗಂಟೆಗೆ ಮಹಾ ಮಂಗಳಾರತಿ ನೆರವೇರಿತು. ರಾಜವಂಶಸ್ಥರು ಪಾಲ್ಗೊಂಡಿದ್ದರು. ಶಾಲ್ಯಾನ್ನ ಅಭಿಷೇಕ: ವರ್ಧಂತ್ಯುತ್ಸವದ ಅಂಗವಾಗಿ ದೇವಿಗೆ ಅನ್ನ, ಬೆಣ್ಣೆ, ಸಕ್ಕರೆ, ಗೋಡಂಬಿ, ದ್ರಾಕ್ಷಿ ಮಿಶ್ರಣದ ಶಾಲ್ಯಾನ್ನ ಅಭಿಷೇಕ ನಡೆಯಿತು. ಪ್ರತಿವರ್ಷ ವರ್ಧಂತಿಯಂದು ಮಾತ್ರ ವಿಶೇಷವಾಗಿ ಶಾಲ್ಯಾನ್ನ ಪಂಚಾಮೃತ ಅಭಿಷೇಕ ಮಾಡುವ ಪ್ರತೀತಿ ಇದೆ.
ಮೆರವಣಿಗೆ: ದೇಗುಲ ಆವರಣದಲ್ಲಿ ಬೆಳಿಗ್ಗೆ 10.30ಕ್ಕೆ ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಆರಂಭವಾಯಿತು. ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್-ತ್ರಿಷಿಕಾಕುಮಾರಿ ದಂಪತಿ, ಪ್ರಮೋದಾದೇವಿ ಒಡೆಯರ್ ಅವರು ಪಲ್ಲಕ್ಕಿಯ ಗಾಡಿಯ ನೊಗವನ್ನು ಎಳೆದು ಬಾಲನೆ ನೀಡಿದರು. ಶಾಸಕ ಜಿ.ಟಿ.ದೇವೇಗೌಡ ಇದ್ದರು.
ಉತ್ಸವಮೂರ್ತಿಯನ್ನು ನೋಡಲು ಭಕ್ತರು ಮುಗಿಬಿದ್ದರು. ಸುಮಾರು ಒಂದು ಗಂಟೆ ಮೆರವಣಿಗೆ ನಡೆಯಿತು. ದೇವಿಯ ದರ್ಶನ ಪಡೆದು ಪುನೀತ ಭಾವ ಮೆರೆದರು.
‘ದೇವಿಯ ಉತ್ಸವಮೂರ್ತಿಯ ಜನ್ಮದಿನೋತ್ಸವವನ್ನು ವರ್ಧಂತಿಯಾಗಿ ಆಚರಿಸಲಾಗುತ್ತದೆ. ಮೊದಲು ಉತ್ಸವ ಮೂರ್ತಿ ಇರಲಿಲ್ಲ. ರಾಜವಂಶಸ್ಥರು ಉತ್ಸವಮೂರ್ತಿಯನ್ನು ದೇಗುಲಕ್ಕೆ ನೀಡಿದ ಕುರುಹಾಗಿ ವರ್ಧಂತಿ ಆಚರಣೆ ಬಂದಿದೆ. ಪ್ರತಿವರ್ಷ ರಾಜವಂಶಸ್ಥರು ಈ ದಿನದಂದು ದೇವಿಗೆ ಸೀರೆ ಅರ್ಪಿಸುತ್ತಾರೆ’ ಎಂದು ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರು ತಿಳಿಸಿದರು.
ನೂಕುನುಗ್ಗಲು: ದರ್ಶನಕ್ಕೆ ಭಕ್ತರು ಸಾಲಿನಲ್ಲಿ ಸಾಗಲು ಬ್ಯಾರಿಕೇಡ್ಗಳನ್ನು ಇಟ್ಟು ಮಾರ್ಗ ನಿರ್ಮಿಸಲಾಗಿತ್ತು. ನೇರ ದರ್ಶನ, ವಿಶೇಷ ಪ್ರವೇಶದ್ವಾರಗಳಲ್ಲಿ ಗಣ್ಯರು, ಅತಿಗಣ್ಯರು, ಜನಪ್ರತಿನಿಧಿಗಳು ಮೊದಲಾದವರಿಗೆ ಅವಕಾಶ ಕಲ್ಪಿಸ ಲಾಗಿತ್ತು. ಈ ದ್ವಾರಗಳಲ್ಲಿ ತಳ್ಳಾಟ, ನೂಕಾಟ ನಡೆಯಿತು.
ಸಂಜೆ 6 ರಿಂದ 7.30ರವರೆಗೆ ದೇವಿಗೆ ಅಭಿಷೇಕ ನಡೆಯಿತು. 8.30 ರಿಂದ 9.30ರವರೆಗೆ ಉತ್ಸವಮೂರ್ತಿಯ ದರ್ಬಾರ್ ಮಂಟಪೋತ್ಸವ ಜರುಗಿತು. 9.30ಕ್ಕೆ ನಡೆದ ಏಕಾಂತ ಕಾಲದೊಂದಿಗೆ ಉತ್ಸವ ಸಂಪನ್ನಗೊಂಡಿತು. ನಟಿ ತಾರಾ ಅನುರಾಧಾ, ಸಚಿವ ಸಂತೋಷ್ಲಾಡ್ ಮೊದಲಾದವರು ದೇವಿಯ ದರ್ಶನ ಪಡೆದರು.
ಖಾಸಗಿ ಬಸ್ ವ್ಯವಸ್ಥೆ: ಕೆಎಸ್‌ಆರ್ಟಿಸಿ ಮತ್ತು ನಗರ ಸಾರಿಗೆ ಮುಷ್ಕರ ನಿಮಿತ್ತ ಜಿಲ್ಲಾಡಳಿತದ ವತಿಯಿಂದ ಚಾಮುಂಡಿ ಬೆಟ್ಟಕ್ಕೆ ಖಾಸಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.ನಗರದ ಲಲಿತ್ಮಹಲ್ ಹೋಟೆಲ್ ಬಳಿಯ ಹೆಲಿಪ್ಯಾಡ್ನಿಂದ ಬೆಟ್ಟಕ್ಕೆ ಬಸ್ ಸೌಕರ್ಯ ಕಲ್ಪಿಸಲಾಗಿತ್ತು.
ವಿವಿಧೆಡೆ ವರ್ಧಂತಿ ಸಡಗರ ಮೈಸೂರು: ನಗರದ ವಿವಿಧೆಡೆ ಚಾಮುಂಡೇಶ್ವರಿ ದೇವಿ ವರ್ಧಂತಿ ಅಂಗವಾಗಿ ಪೂಜೆ, ಅಭಿಷೇಕ, ಅನ್ನಸಂತರ್ಪಣೆ ಜರುಗಿದವು.
ವಿಜಯನಗರದ ಯೋಗಾ ನರಸಿಂಹಸ್ವಾಮಿ ಆಟೊ ಚಾಲಕರು ಮತ್ತ ನಿವಾಸಿಗಳ ಬಳಗದ ವತಿಯಿಂದ ವರ್ಧಂತ್ಯುತ್ಸವ ಆಚರಿಸಲಾಯಿತು. ನೂರಾರು ಮಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಯೋಗಾನರಸಿಂಹಸ್ವಾಮಿ ದೇಗುಲದ ಮುಂಭಾಗದಲ್ಲಿರುವ ಚಾಮುಂಡೇಶ್ವರಿ ದೇಗುಲದಲ್ಲಿ ಬೆಳಿಗ್ಗೆ 6ರಿಂದ ಮಧ್ಯಾಹ್ನ4 ಗಂಟೆವರೆಗೆ ಪೂಜಾ ಕೈಂಕರ್ಯ, ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಮಧ್ಯಾಹ್ನ 12ರಿಂದ 4ರವರೆಗೆ ಅನ್ನಸಂತರ್ಪಣೆ ನೆರವೇರಿತು. ಆಟೊ ಚಾಲಕರ ಸಂಘದ ಪದಾಧಿಕಾರಿಗಳು, ಪಡುವಾರಹಳ್ಳಿಯ ಮಾದೇಗೌಡ ಅವರು ನೇತೃತ್ವ ವಹಿಸಿದ್ದರು.
ವಿ.ವಿ ಮೊಹಲ್ಲದ ಕಾಳಿದಾಸ ರಸ್ತೆಯ ದೇ.ಜವರೇಗೌಡ ವೃತ್ತದಲ್ಲಿ ಆಟೊ ಚಾಲಕರ ಸಂಘದ ವತಿಯಿಂದ ಪೂಜೆ ಜರುಗಿತು. ಸಾರ್ವಜನಿಕರಿಗೆ ರೈಸ್ ಬಾತ್ ಮತ್ತು ಕೇಸರಿ ಬಾತ್ ವಿತರಿಸಲಾಯಿತು. ಕೃಷ್ಣವಿಲಾಸ ರಸ್ತೆಯಲ್ಲಿ ರೋಟರಿ ಶಾಲೆ ಬಳಿ ಆಟೋ ಚಾಲಕರು ಪೂಜೆ ನೆರವೇರಿಸಿ, ಪಲಾವ್ ಮತ್ತು ಕೇಸರಿಬಾತ್ ಹಂಚಿದರು.
ಚಾಮರಾಜ ಮೊಹಲ್ಲಾದ 6ನೇ ಅಡ್ಡರಸ್ತೆಯ ಕುರುಬರ ಶ್ರೀರಾಮಮಂದಿರ, ವಿದ್ಯಾನಗರ 6ನೇ ಅಡ್ಡರಸ್ತೆಯ ಚಾಮುಂಡೇಶ್ವರಿ ದೇಗುಲ, ಲಷ್ಕರ್ ಮೊಹಲ್ಲದ ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ಯುವಕ ಮಂಡಳಿಯಲ್ಲಿ ಪೂಜೆ, ತೀರ್ಥ, ಪ್ರಸಾದ ವಿತರಣೆ ನಡೆದವು. ಕೆ.ಆರ್.ಮೊಹಲ್ಲಾದ ಜೈಮಾರುತಿ ಸ್ನೇಹ ಬಳಗದ ವತಿಯಿಂದ ಮೆರವಣಿಗೆ ನಡೆಯಿತು.
ವರದಿ ಕೃಪೆ : ಪ್ರಜಾವಾಣಿ
Comments are closed.