ಮನೋರಂಜನೆ

ಅರ್ಥಹೀನ ಸಂತೆಯಲ್ಲಿ ಸಂತನ ದರಬಾರು

Pinterest LinkedIn Tumblr

santaಚಿತ್ರ: ಸಂತೆಯಲ್ಲಿ ನಿಂತ ಕಬೀರ ನಿರ್ದೇಶನ: ಇಂದ್ರ ಬಾಬು ನಿರ್ಮಾಣ: ಪತ್ತಿಕೊಂಡ ಕುಮಾರಸ್ವಾಮಿ
ತಾರಾಗಣ: ಶಿವರಾಜಕುಮಾರ್‌, ಸನುಷಾ, ಶರತ್‌ ಕುಮಾರ್‌, ಅವಿನಾಶ್‌, ಭಾಗೀರತಿ ಬಾಯಿ ಕದಂ, ಅನಂತ್‌ನಾಗ್‌ ಮುಂತಾದವರು

ಸಿಖಂದರ್‌ ಲೋಧಿಯ ಸೈನಿಕರು ಕಬೀರನನ್ನು ಸುತ್ತುಗಟ್ಟಿದ್ದಾರೆ. ಇನ್ನೇನು ಅವರೆಲ್ಲಾ ಮುಗಿಬೀಳಬೇಕು ಎನ್ನುವಷ್ಟರಲ್ಲಿ ಕಬೀರ ಸೆಟೆದು ನಿಲ್ಲುತ್ತಾನೆ. ಅವರನ್ನೆಲ್ಲಾ ಅಟ್ಟಾಡಿಸಿ, ಲೋಧಿಯ ಎದುರು ನಿಂತು ಕಣ್ಣಿಗೆ ಕಣ್ಣು ಮಿಲಾಯಿಸಿ, ಕತ್ತಿಗೆ ಕತ್ತಿ ಝಳಪಿಸಿ …

“ಸಂತೆಯಲ್ಲಿ ನಿಂತ ಕಬೀರ’ದಲ್ಲಿ ಇವೆಲ್ಲಾ ಆಗುತ್ತದೆ ಎಂದು ನೀವು ನಂಬಿಕೊಂಡು ಹೋದರೆ ಖಂಡಿತಾ ನಿರಾಸೆ ಗ್ಯಾರಂಟಿ. ಅದರಲ್ಲೂ ಶಿವರಾಜಕುಮಾರ್‌ ಅಭಿಮಾನಿಗಳಿಗೆ, “ಸಂತೆಯಲ್ಲಿ ನಿಂತ ಕಬೀರ’ ನಿರಾಸೆ ಮಾಡುವುದು ಖಂಡಿತಾ. ಏಕೆಂದರೆ, ಶಿವರಾಜಕುಮಾರ್‌ ಅವರ ಚಿತ್ರಗಳಲ್ಲಿರಬಹುದಾದ ಯಾವುದೇ ಕಮರ್ಷಿಯಲ್‌ ಅಂಶಗಳು, ಹೊಡೆದಾಟಗಳು, ಜಿಗಿಜಿಗಿ ಹಾಡುಗಳು, ಕಾಮಿಡಿ, ಬಿಲ್ಡಪ್‌ಗ್ಳು ಯಾವುದೂ ಈ ಚಿತ್ರದಲ್ಲಿಲ್ಲ. ಹಾಗಾಗಿ ಶಿವರಾಜಕುಮಾರ್‌ ಅವರ ಅಭಿಮಾನಿಗಳಿಗಗೆ ಈ ಚಿತ್ರ ಹಿಡಿಸುವುದು ಸ್ವಲ್ಪ ಕಷ್ಟವೇ.

ಆದರೆ, ಒಂದೊಳ್ಳೆಯ ಸದಾಭಿರುಚಿಯ ಚಿತ್ರ ನೋಡುವುದಕ್ಕೆ ಇಷ್ಟಪಡುವವರಿಗೆ, ಮನೆಮಂದಿಯೆಲ್ಲಾ ಕುಳಿತು ಸಿನಿಮಾ ನೋಡುವವರಿಗೆ “ಸಂತೆಯಲ್ಲಿ ನಿಂತ ಕಬೀರ’ ನಿಜಕ್ಕೂ ಒಳ್ಳೆಯ ಚಿತ್ರ. ಚಿತ್ರದಲ್ಲಿ ಯಾವುದೇ ಕಮರ್ಷಿಯಲ್‌ ಸೂತ್ರಗಳು ಇಲ್ಲದೆಯೂ, ಪ್ರೇಕ್ಷಕರನ್ನು ಎರಡು ಗಂಟೆ ಇಪ್ಪತ್ತು ನಿಮಿಷಗಳ ಕಾಲ ಕೂಡಿಸುವ ಪ್ರಯತ್ನವನ್ನು ಚಿತ್ರಕಥೆ, ಅಭಿನಯ, ಹಾಡುಗಳು, ಮಾತುಗಳು ಮತ್ತು ಛಾಯಾಗ್ರಹಣದ ಮೂಲಕ ಮಾಡಲಾಗಿದೆ. ಹಾಗಾಗಿ ನಿರ್ದೇಶಕ ಇಂದ್ರ ಬಾಬು ಅಲಿಯಾಸ್‌ ನರೇಂದ್ರ ಬಾಬು ಅವರ ಬೆನ್ನು ತಟ್ಟಲೇಬೇಕು. ಯಾವೊಂದು ಕಮರ್ಷಿಯಲ್‌ ಅಂಶದ ನೆರವಿಲ್ಲದೆ ಬರೀ ಭಕ್ತಿ, ಪ್ರೀತಿ, ಒಂದಿಷ್ಟು ಗಂಭೀರವಾದ ವಿಷಯಗಳನ್ನು ಮತ್ತು ಮನಕಲಕುವ ಸನ್ನಿವೇಶಗಳ ಮೂಲಕ ಸರಳವಾಗಿ ಚಿತ್ರವನ್ನು ನೋಡುವಂತೆ ಮಾಡಿರುವುದು ಚಿತ್ರದ ಹೆಗ್ಗಳಿಕೆ.

“ಸಂತೆಯಲ್ಲಿ ನಿಂತ ಕಬೀರ’ ಚಿತ್ರವು 15ನೇ ಶತಮಾನದ ಸಂತ ಕಬೀರನ ಕಥೆಯನ್ನು ಹೇಳುತ್ತದೆ. ಗಾಂಧೀಜಿಯವರ ಸತ್ಯಾಗ್ರಹ ಮತ್ತು ಅಹಿಂಸೆಗೆ ಮಾದರಿಯಾಗಿದ್ದ ಕಬೀರನ ಜೀವನ ಚರಿತ್ರೆಯನ್ನು ತೆಗೆದಿಡುತ್ತದೆ. ಜಾತಿ, ಧರ್ಮಗಳನ್ನು ಮೀರಿ ಮನುಷ್ಯತ್ವ, ಪ್ರೀತಿಗಾಗಿ ಸಿಖಂದರ್‌ ಲೋಧಿಯನ್ನೇ ಎದುರು ಹಾಕಿಕೊಳ್ಳುವ ಒಬ್ಬ ಸಾಮಾನ್ಯ ಸಂತನ ಕಥೆಯನ್ನು ಸಾರುತ್ತದೆ. ಚಿತ್ರ ಪ್ರಾರಂಭವಾಗುವುದು ಮುಸ್ಲಿಂ ದಂಪತಿಗೆ ಗಂಡು ಅನಾಥ ಮಗುವೊಂದು ಸಿಗುವ ಮೂಲಕ. ಆ ಮಗುವಿಗೆ ಕಬೀರ ಎಂದು ನಾಮಕರಣ ಮಾಡಲಾಗುತ್ತದೆ. ಕಬೀರ ಬೆಳೆದು ದೊಡ್ಡವನಾಗುತ್ತಿದ್ದಂತೆ, ಹಿಂದು ಮತ್ತು ಮುಸ್ಲಿಂ ಧರ್ಮಗಳಲ್ಲಿರುವ ಕಂದಾಚಾರದ ವಿರುದ್ಧ ಬಂಡಾಯವೇಳುತ್ತಾನೆ ಕಬೀರ. ಇದರಿಂದ ಒಂದು ಕಡೆ ಕಾಶೀಪುರದ ದೀನದಲಿತರ ಆಶಾಕಿರಣದಂತೆ ಕಂಡರೆ, ಇನ್ನೊಂದು ಕಡೆ ಧಾರ್ಮಿಕ ಗುರುಗಳ ತಾಪವನ್ನೂ ಕಟ್ಟಿಕೊಳ್ಳುತ್ತಾನೆ. ಏನೇ ಆದರೂ, ಅಹಿಂಸೆ, ಪ್ರೀತಿ, ಸೋದರತ್ವದಿಂದ ಹೇಗೆ ಎಲ್ಲರನ್ನೂ ಗೆಲ್ಲುತ್ತಾನೆ ಮತ್ತು ಸಂತಶ್ರೇಷ್ಠನಾಗುತ್ತಾನೆ ಎನ್ನುವುದೇ ಚಿತ್ರದ ಕಥೆ.

ಬರೀ ದೆವ್ವಗಳನ್ನು ಬಿಟ್ಟು ಹೆದರಿಸುವ, ಇಲ್ಲ ಸಲ್ಲಿ ಕಾಮಿಡಿ ಮಾಡಿ ಜನರನ್ನು ನಗಿಸುವ ಚಿತ್ರಗಳೇ ಹೆಚ್ಚು ಬರುತ್ತಿರವ ಈ ಕಾಲದಲ್ಲಿ ಇಂಥದ್ದೊಂದು ಚಿತ್ರ ನಿಜಕ್ಕೂ ಅಪರೂಪ. ಮೊದಲೇ ಹೇಳಿದಂತೆ ಈ ಚಿತ್ರವನ್ನು ಶಿವರಾಜಕುಮಾರ್‌ ಅವರ ಹಿಂದಿನ ಚಿತ್ರಗಳನ್ನು ಗಮನದಲ್ಲಿಟ್ಟುಕೊಂಡು ನೋಡುವ ಹಾಗಿಲ್ಲ. ಈ ಚಿತ್ರ ನೋಡುವುದಕ್ಕೆ ಬೇರೆಯದೇ ಮನಸ್ಥಿತಿ, ತಾಳ್ಮೆ ಬೇಕು. ಅವೆಲ್ಲಾ ಇದ್ದರಷ್ಟೇ ಚಿತ್ರ ಖುಷಿಯಾಗುವುದು. ಅದು ಬಿಟ್ಟು ಕಮರ್ಷಿಯಲ್‌ ಅಂಶಗಳನ್ನು ಹುಡುಕಿದರೆ, ಶಿವರಾಜಕುಮಾರ್‌ ಅವರ ಹಿಂದಿನ ಪಾತ್ರಗಳನ್ನು ನೆನಪಿಸಿಕೊಂಡರೆ ಚಿತ್ರ ನಿಧಾನ ಎನಿಸಬಹುದು ಅಥವಾ ಬೋರ್‌ ಆಗಬಹುದು. ಆದರೆ, ಯಾವುದೇ ಹ್ಯಾಂಗೋವರ್‌ಗಳಿಲ್ಲದೆ ಚಿತ್ರ ನೋಡಿದಾಗ, ಚಿತ್ರ ಖುಷಿಯಾಗದಿರುವುದಕ್ಕೆ ಚಾನ್ಸೇ ಇಲ್ಲ. ಆ ಮಟ್ಟಿಗೆ ಅಚ್ಚುಕಟ್ಟಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ.

ಹಾಗಂತ ಚಿತ್ರದಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ಪ್ರಮುಖವಾಗಿ ಕಬೀರನ ಬಾಲ್ಯ, ಆತ ರಮಾನಂದರಿಂದ ಆಕರ್ಷಿತನಾಗುವ ಬಗ್ಗೆ, ಆತನ ಹೋರಾಟಗಳ ಬಗ್ಗೆ ಇನ್ನಷ್ಟು ಹೆಚ್ಚು ಬೆಳಕು ಚೆಲ್ಲಬಹುದಿತ್ತೇನೋ? ಆದರೆ, ಅವೆಲ್ಲವನ್ನೂ ಚಿತ್ರದಲ್ಲಿ ಬಳಸಿಕೊಂಡಿದ್ದರೆ, ಚಿತ್ರ ಇನ್ನಷ್ಟು ಬೆಳೆಯುವ ಅಪಾಯವಿತ್ತು ಎಂಬ ಕಾರಣಕ್ಕೆ ಅದನ್ನು ಬಿಟ್ಟಿದ್ದರೆ ಆಶ್ಚರ್ಯವೇನಿಲ್ಲ. ಆದರೂ ಈ ಮೂರು ಅಂಶಗಳಿಗೆ ಚಿತ್ರದಲ್ಲಿ ಇನ್ನಷ್ಟು ಹೆಚ್ಚು ಕೊಡಬೇಕಿತ್ತು ಎಂದನಿಸುವುದು ಸಹಜ. ಏಕೆಂದರೆ, ಕಬೀರನ ಬಾಲ್ಯ ಹೇಗಿತ್ತು, ದೇವರು ಮತ್ತು ಧರ್ಮದ ವಿಚಾರದಲ್ಲಿ ಅವನಿಗೆ ಜ್ಞಾನೋದಯವಾಗಿದ್ದು, ಕಬೀರನ ಪಯಣದಲ್ಲಿ ಗುರು ರಮಾನಂದರ ಪಾತ್ರ … ಹೀಗೆ ಯಾವುದೂ ದಾಖಲಾಗುವುದಿಲ್ಲ. ಬಹಳ ಕಡಿಮೆ ಸಮಯದಲ್ಲಿ ಈ ಎಲ್ಲಾ ಘಟ್ಟಗಳನ್ನು ದಾಟಿ ಕಬೀರ ಸಂತನಾಗುವುದನ್ನು ನೋಡುವುದು ಕಷ್ಟವಾಗುತ್ತದೆ. ಇಂತಹ ಕೆಲವು ಅಂಶಗಳನ್ನು ಹೊರತುಪಡಿಸಿದರೆ, ಚಿತ್ರದ ಬಗ್ಗೆ ಹೆಚ್ಚು ತಪ್ಪುಗಳನ್ನು ಹುಡುಕುವುದು ಕಷ್ಟ.

ಇನ್ನು ಚಿತ್ರದ ಪ್ಲಸ್‌ಗಳ ಬಗ್ಗೆ ಮಾತನಾಡುವುದಾದರೆ, ಮೊದಲಿಗೆ ಸಿಗುವುದು ಶಿವರಾಜಕುಮಾರ್‌ ಅವರ ಅಭಿನಯ, ಇಸ್ಮಾಯಿಲ್‌ ದರ್ಬಾರ್‌ ಅವರ ಸಂಗೀತ ಮತ್ತು ನವೀನ್‌ ಕುಮಾರ್‌ ಅವರ ಛಾಯಾಗ್ರಹಣ. ಚಿತ್ರದಲ್ಲಿ ಶಿವರಾಜಕುಮಾರ್‌ ಅವರ ತನ್ಮಯತೆ ನೋಡಬೇಕು. ತಾನು ಅನಾಥ ಎಂದು ಗೊತ್ತಾದಾಗ, ಕಟ್ಟಿಕೊಂಡ ಹೆಂಡತಿ ಮೊದಲ ರಾತ್ರಿಯೇ ಮನೆಬಿಟ್ಟು ಹೊರಡುವಾಗ, ಧರ್ಮಾಂಧರ ಎದುರು ನಿಂತು ವಾದ ಮಾಡುವಾಗ ಶಿವರಾಜಕುಮಾರ್‌ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾರೆ. ಇನ್ನು ಅವರ ತಾಯಿಯಾಗಿ ನಟಿಸಿರುವ ಭಾಗೀರತಿ ಬಾಯಿ ಕದಂ ಸಹ ಒಂದು ಕೈ ಮೇಲಕ್ಕಿದ್ದಾರೆ. ಸನುಷಾ, ಅವಿನಾಶ್‌, ಶರತ್‌ ಲೋಹಿತಾಶ್ವ, ಡ್ಯಾನಿ ಕುಟ್ಟಪ್ಪ, ಅನಂತ್‌ನಾಗ್‌, ಸತ್ಯಜಿತ್‌ ಎಲ್ಲರೂ ಮನಸ್ಸಿನಲ್ಲುಳಿಯುತ್ತಾರೆ. ಕಬೀರನ ದೋಹಾಗಳನ್ನು ಕನ್ನಡಕ್ಕೆ ಅಚ್ಚುಕಟ್ಟಾಗಿ ತಂದಿರುವ ಮತ್ತು ಸಂಭಾಷಣೆಗಳಿಂದಲೇ ಎಲ್ಲರನ್ನೂ ಬಡಿದಬ್ಬಿಸುವ ಗೋಪಾಲ ವಾಜಪೇಯಿ, ಸಂಗೀತವಷ್ಟೇ ಅಲ್ಲ ಹಿನ್ನೆಲೆ ಸಂಗೀತದಲ್ಲೂ ಹಿಡಿದಿಡುವ ಇಸ್ಮಾಯಿಲ್‌ ದರ್ಬಾರ್‌, ಒಳಾಂಗಣವಾಗಲೀ ಹೊರಾಂಗಣವಾಗಲೀ ಸುಂದರ ದೃಶ್ಯಗಳನ್ನು ಕಟ್ಟಿಕೊಡುವ ನವೀನ್‌ ಕುಮಾರ್‌ ಮತ್ತು ಇವರೆಲ್ಲರಿಂದಲೂ ಅಚ್ಚುಕಟ್ಟಾಗಿ ಕೆಲಸ ತೆಗೆಸಿರುವ ಇಂದ್ರಬಾಬು ಅವರನ್ನು ಮರೆಯುವುದು ಕಷ್ಟ.

“ಸಂತೆಯಲ್ಲಿ ನಿಂತ ಕಬೀರ’ನನ್ನು ಮಿಸ್‌ ಮಾಡಿಕೊಳ್ಳದಿರಿ!

– ಚೇತನ್‌ ನಾಡಿಗೇರ್‌
Read more at http://www.udayavani.com/kannada/news/balcony-sandalwood-news/161408/santeyalli-ninta-kabeera#44ZLA6CKgq93iuXd.99

-ಉದಯವಾಣಿ

Comments are closed.