ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಆಗಸ್ಟ್.1 : ಆಟಿ ತಿಂಗಳೆಂದರೆ ಅನಿಷ್ಟದ ತಿಂಗಳು ಎಂಬ ವಾಡಿಕೆ ಇದೆ.ಆದರೆ ಆಟಿ ತಿಂಗಳು ಅನಿಷ್ಟ ತಿಂಗಳಲ್ಲ. ಆಟಿ ತಿಂಗಳ ಮಹತ್ವವನ್ನು ತಿಳಿದುಕೊಂಡು ಆಟಿ ತಿಂಗಳ ಬಗ್ಗೆ ಇರುವ ಮೌಢ್ಯವನ್ನು ದೂರ ಮಾಡುವ ಕೆಲಸ ಇಂಥ ಅಚರಣೆ ಮೂಲಕ ಆಗ ಬೇಕು ಎಂದು ಮಾಜಿ ಜಿಲ್ಲಾ ಲಯನೆಸ್ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ರೈ ಹೇಳಿದರು.
ಅವರು ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ವತಿಯಿಂದ ಮಹಿಳಾ ಸಂಘಟನೆ ಹಾಗೂ ಯುವಜನ ಸಂಘಟನೆಯ ಅಶ್ರಯದೊಂದಿಗೆ ನಗರದ ಮಣ್ಣಗುಡ್ಡೆಯ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಹವಾನಿಯಂತ್ರಿತ ಸಮಾಜ ಭವನದಲ್ಲಿ ಬಾನುವಾರ ಸಂಜೆ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಆಟಿ ಆಚರಣೆ ಹಾಗೂ ಅದರ ಮಹತ್ವದ ಬಗ್ಗೆ ಭಾಷಣ ಮಾಡಿದರು.
ಇಂದಿನ ಅಧುನಿಕ ಶೈಲಿಯ ಪದ್ದತಿ ಮತ್ತು ಆಡಂಬರದ ಜೀವನ ಶೈಲಿಯ ಕ್ರಮಕ್ಕೆ ಮಾರು ಹೋಗಿ ನಮ್ಮ ಸಾಂಸ್ಕೃತಿಕ ಆಚರಣೆಗಳ ವೈಭವದ ಆಚರಣೆ ಬೇಡ ಎಂದು ಹೇಳಿದ ಅವರು, ಹಿರಿಯರು ಮಾಡಿಕೊಂಡು ಬಂದಿರುವ ಇಂಥ ಆಚರಣೆಗಳ ಮೌಡ್ಯವನ್ನು ದೂರಗೊಳಿಸಿ ಈ ಆಚರಣೆಗಳ ಮೂಲ ಹುಡುಕ ಬೇಕು ಎಂದು ಹೇಳಿದರು.
ಆಟಿ ತಿಂಗಳಲ್ಲಿ ಶುಭಕಾರ್ಯ ಏಕೆ ಆಗುವುದಿಲ್ಲ, ಆಟಿ ತಿಂಗಳಲ್ಲಿ ಸೊಪ್ಪು ತರಕಾರಿ ಹೆಚ್ಚು ತಿನ್ನುವುದು ಯಾಕೆ. ಹಾಲೆ ಮರದ ಕಷಾಯ ಏಕೆ ಕುಡಿಯ ಬೇಕು. ಹಾಲೆ ಮರದ ತೊಗಟೆಯನ್ನು ಕಲ್ಲಿನಿಂದಲೇ ಯಾಕೆ ಜಜ್ಜಿ ತರಬೇಕು,ಆಟಿ ತಿಂಗಳಲ್ಲಿ ಆಟಿ ಕಳಂಜೆ ಬರುವ ಮಹತ್ವ ಏನು.. ಆಟಿ ತಿಂಗಳ ಬಗ್ಗೆ ಇರುವ ಇಂಥ ಹಲವಾರು ಪ್ರಶ್ನೆಗಳ ಬಗ್ಗೆ ವಿಜಯಲಕ್ಷ್ಮಿ ರೈ ಅವರು ವಿವರಣೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ನಮ್ಮ ಟಿವಿಯ ನಿರೂಪಕ, ತುಳು ಪಂಡಿತರಾದ ನವೀನ್ ಕುಮಾರ್ ಶೆಟ್ಟಿ ಎಡ್ಮೆರ್ ಅವರು ತುಳು ನಾಡಿನಲ್ಲಿ ಆಟಿ ಆಚರಣೆಗಿರುವ ಮಹತ್ವ, ಆಟಿ ತಿಂಗಳ ಮಹತ್ವ ಹಾಗೂ ಆಟಿ ಆಚರಣೆ ಬಗ್ಗೆ ತುಳುವಿನಲ್ಲಿ ಉಪನ್ಯಾಸ ನೀಡಿದರು.
ಆರಂಭದಲ್ಲಿ ಅತಿಥಿಗಳು ಕಾಗದದ ದೋಣಿಗಳನ್ನು ನೀರಿನಲ್ಲಿ ಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ವಾಮನ್ ಮರೋಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರತ್ನಾಕರ್ ದೇವಾಡಿಗ, ಪ್ರಧಾನ ಕಾರ್ಯದರ್ಶಿನ್ ಎಂ. ದೇವದಾಸ್, ಕೋಶಾಧಿಕಾರಿ ಶಶಿಧರ್ ಮೊಯ್ಲಿ, ಸಂಘಟನಾ ಕಾರ್ಯದರ್ಶಿ ಯಶವಂತ ದೇವಾಡಿಗ ಕದ್ರಿ, ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಗೀತಾ ವಿ ಕಲ್ಯಾಣ್ ಪುರ್, ಯುವ ಸಂಘಟನೆಯ ಅಧ್ಯಕ್ಷ ಯಂ.ಎಚ್.ಪ್ರಶಾಂತ್,ಮಹಿಳಾ ಸಂಘಟನೆಯ ಮಾಜಿ ಅಧ್ಯಕ್ಷೆ ಶ್ರೀಮತಿ ವೇಣಿ ಮರೋಳಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಹಿಳಾ ಸಂಘಟನೆಯ ಮಾಜಿ ಅಧ್ಯಕ್ಷೆ ಶ್ರೀಮತಿ ವೇಣಿ ಮರೋಳಿಯವರ ಸಂಯೋಜನೆಯಲ್ಲಿ ಆಟಿ ತಿಂಗಳಲ್ಲಿ ಮಾಡುವಂತಹ ಅಹಾರ ಪದಾರ್ಥಗಳ ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ಇದರ ತೀಪುಗಾರರಾಗಿ ಲಯನೆಸ್ ಸ್ವರೂಪ್ ನಿತ್ಯಾನಂದ ಶೆಟ್ಟಿ ಲಯನೆಸ್ ಪದ್ಮಿನಿ ಪ್ರಶಾಂತ್ ರಾವ್ ಭಾಗವಹಿಸಿದ್ದರು.
ಆಟಿ ತಿಂಗಳ ಅಹಾರ ಪದಾರ್ಥಗಳ ಸ್ಫರ್ಧೆಯಲ್ಲಿ “ಆಟಿಗ್ ತುಳುನಾಡ ತುಡರ್” ಹೆಸರಿನ ದಿ.ರಾಜೀವಿ ಶೇರಿಗಾರ್ ತಂಡ ಪ್ರಥಮ ಬಹುಮಾನ ಪಡೆಯಿತು. “ಅಟಿಲ್ದ ಅರಗಣೆಡ್ ಆಟಿದ ಅಟ್ಟನೆಲ್” ಬಾಕಿಮಾರ್ ತಂಡ ದ್ವಿತೀಯ ಬಹುಮಾನ ಹಾಗೂ “ಆಟಿ ಕಷ್ಟ ತೆನಸ್ ಇಷ್ಟ” ಕೆಂಬಾರ್ ತಂಡ ತೃತೀಯ ಬಹುಮಾನ ಪಡೆಯಿತು.
ಅದೇ ರೀತಿ ಉತ್ತಮ ಆಹಾರ ಪದಾರ್ಥಗಳನ್ನು ತಯಾರಿಸಿದ ವೈಯಕ್ತಿಕ ವಿಭಾಗದಲ್ಲಿ “ಆಟಿದ ತಮ್ಮಣ” – ವಿದ್ಯಾಕಿಶನ್ ಅವರಿಗೆ ಪ್ರಥಮ, “ಆಟಿದ ವನಸ್” – ಇಂದುಮತಿ ಅಶ್ವಿನ್ ಇವರಿಗೆ ದ್ವೀತಿಯ ಮತ್ತು “ಆಟಿದ ತಿನಸ್” – ಕಲ್ಯಾಣಿ ಕಣ್ವತೀರ್ಥ ಇವರಿಗೆ ತೃತೀಯ ಬಹುಮಾನ ಲಭಿಸಿತು. ಆಟಿ ತಿಂಗಳ ಅಹಾರ ಪದಾರ್ಥಗಳ ಸ್ಫರ್ಧೆಯಲ್ಲಿ ವಿಜೇತದಾರವರಿಗೆ ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಸದಸ್ಯರೇ ಮನೆಯಲ್ಲಿ ತಯಾರಿಸಿ ತಂದತಹ ನೂರಾರು ಬಗೆಯ ಆಟಿ ತಿಂಗಳಲ್ಲಿ ಹೆಚ್ಚಾಗಿ ಮಾಡುವಂತಹ ವಿಶೇಷ ಆಹಾರಗಳನ್ನು ಎಲ್ಲರೂ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಮತಿ ಗೀತಾ ವಿ ಕಲ್ಯಾಣ್ ಪುರ್ ಸ್ವಾಗತಿಸಿದರು. ವಿಜೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶ್ರೀಮತಿ ಸುಮತಿ ದೇವಾಡಿಗ ವಂದಿಸಿದರು.
ವರದಿ / ಚಿತ್ರ : ಸತೀಶ್ ಕಾಪಿಕಾಡ್
Comments are closed.