ಮಂಗಳೂರು, ಆಗಸ್ಟ್.1 : ಆಳಸಮುದ್ರ ಮೀನುಗಾರಿಕೆಗೆ ಇದ್ದ ಎರಡು ತಿಂಗಳ ನಿಷೇಧ ಅವಧಿ ಇಂದಿಗೆ ಕೊನೆಗೊಂಡ ಹಿನ್ನೆಲೆಯಲ್ಲಿ 6೦ದಿನಗಳ ಸುದೀರ್ಘ ರಜೆ ಮುಗಿಸಿಕೊಂಡ ಯಾಂತ್ರೀಕೃತ ಬೋಟುಗಳು ಇಂದು ಲಂಗರು ಬಿಚ್ಚಿ ಕಡಲಿಗೆ ಇಳಿದು ಆಳಸಮುದ್ರದಲ್ಲಿ ಮತ್ಸ್ಯಬೇಟೆ ಆರಂಭಿಸಿದೆ.
ಆಳಸಮುದ್ರ ಮೀನುಗಾರಿಕೆಗಿದ್ದ ಎರಡು ತಿಂಗಳ ನಿಷೇಧದ ಅವಧಿ ಜು.31ಕ್ಕೆ ಮುಕ್ತಾಯವಾಗಿದೆ.ಎರಡು ತಿಂಗಳ ರಜೆಯಿಂದಾಗಿ ಇಷು ದಿನ ಸಾಂಪ್ರದಾಯಿಕ ಬೋಟ್ಗಳ ಮೂಲಕ ಮೀನುಗಾರಿಕೆಗೆ ತೃಪ್ತಿಪಟ್ಟುಕೊಂಡಿದ್ದ ಮೀನುಗಾರರು ಇಂದು ಭಾರೀ ನಿರೀಕ್ಷೆ ಯೊಂದಿಗೆತಮ್ಮ ಸುಸಜ್ಜಿತ, ಅತ್ಯಾಧುನಿಕ ಬೋಟ್ಗಳೊಂದಿಗೆ ಬಣ್ಣಬಣ್ಣದ ಬಲಿಷ್ಠ ಬಲೆಗಳು, ಗರಿಷ್ಠ ತೂಕದ ಬೋಟ್ಗಳನ್ನು ಎಳೆಯುವ ಹಗ್ಗಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಬೋಟ್ಗಳಲ್ಲಿ ತುಂಬಿ ಆಳಸಮುದ್ರದ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿದ್ದಾರೆ.ಬೆಳಗಿನಿಂದಲೇ ಮೀನುಗಾರರು ಉತ್ಸುಕರಾಗಿದ್ದಾರೆ. ಹೆಚ್ಚು ಮೀನುಗಳು ಬಲೆಯೊಳಗೆ ಬೀಳಲಿ ಎಂಬ ಪ್ರಾರ್ಥನೆ ಸಲ್ಲಿಸಿ ಮೀನುಗಾರಿಕೆ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ 68 ಪರ್ಸಿನ್ ಹಾಗೂ 1037 ಟ್ರಾಲ್ ದೋಣಿಗಳಿದ್ದು, ಅವೆಲ್ಲವೂ ಇಂದು ಕಡಲಿಗಿಳಿಯಲು ಹೊರಟಿವೆ.. ಮೀನುಗಾರಿಕೆ ನಿಷೇಧದಿಂದ ಎರಡು ತಿಂಗಳಿನಿಂದ ವ್ಯಾಪಾರ ವಹಿವಾಟುಗಳು ಕುಂಠಿತವಾಗಿದ್ದ ಬಂದರು ಪ್ರದೇಶದಲ್ಲಿ ಮತ್ತೆ ವಹಿವಾಟು ಗರಿಗೆದರಿದೆ.
ಜೂನ್ ಹಾಗೂ ಜುಲೈ ತಿಂಗಳು ಮೀನುಗಳ ಸಂತಾನೋತ್ಪತ್ತಿ ಸಮಯವಾದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸರಕಾರದಿಂದ ನಿರ್ಬಂಧವಿದೆ. ಈ ಸಮಯದಲ್ಲಿ ಬೋಟ್ ಗಳಿಗೆ ಪೈಂಟಿಂಗ್, ಆಯಿಲ್ ಚೇಂಜ್, ಬಲೆ ರಿಪೇರಿ ಮತ್ತಿತರ ಕೆಲಸಗಳನ್ನು ಮಾಡುವ ಮೀನುಗಾರರು ಮತ್ತೆ ಇದೀಗ ಮತ್ಸ್ಯಬೇಟೆ ಆರಂಭಿಸಿದ್ದಾರೆ.
ಎರಡು ತಿಂಗಳ ಆಳಸಮುದ್ರ ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಯದೆ ಕೇವಲ ನಾಡದೋಣಿ ಮೀನುಗಾರಿಕೆ ನಡೆಯುತ್ತಿದೆ. ಇದರಲ್ಲಿ ಹೆಚ್ಚಿನ ಮೀನುಬೇಟೆ ಸಾಧ್ಯವಿಲ್ಲ. ಇದೀಗ ಮತ್ತೆ ಆಳಸಮುದ್ರ ಮೀನುಗಾರಿಕೆ ಆರಂಭವಾಗಿರುವುದರಿಂದ ಇನ್ನು ಅಪಾರ ಪ್ರಮಾಣದ ಮೀನುಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯನ್ನಿಡಲಾಗಿದೆ.
Comments are closed.