ನವದೆಹಲಿ: ಮಾಜಿ ಮುಖ್ಯಮಂತ್ರಿಗಳು ಜೀವನ ಪರ್ಯಂತ ಸರ್ಕಾರಿ ವಸತಿ ಸವಲತ್ತಿಗೆ ಅರ್ಹರಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಅನಿಲ್.ಆರ್. ದವೆ ನೇತೃತ್ವದ ತ್ರಿಸದಸ್ಯ ಪೀಠವು 2004ರ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುತ್ತಾ ‘ಇಂತಹ ಯಾವುದೇ ಸರ್ಕಾರಿ ವಸತಿಯನ್ನು ಎರಡು ಅಥವಾ ಮೂರು ತಿಂಗಳಲ್ಲಿ ಖಾಲಿ ಮಾಡಬೇಕು. ಜೀವನ ಪರ್ಯಂತ ಸರ್ಕಾರಿ ವಸತಿ ಸವಲತ್ತು ಹೊಂದುವ ಹಕ್ಕು ಅವರಿಗೆ ಇಲ್ಲ’ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಎಲ್. ನಾಗೇಶ್ವರ ರಾವ್ ಅವರು ಪೀಠದ ಇತರ ಇಬ್ಬರು ಸದಸ್ಯರಾಗಿದ್ದು, ಉತ್ತರ ಪ್ರದೇಶದ ಸರ್ಕಾರೇತರ (ಎನ್ಜಿಒ) ಸಂಘಟನೆ ಲೋಕ ಪ್ರಹರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಈ ತೀರ್ಪು ನೀಡಿದೆ. ಮಾಜಿ ಮುಖ್ಯಮಂತ್ರಿಗಳು ಮತ್ತು ಇತರ ಅನರ್ಹ ಸಂಘಟನೆಗಳಿಗೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡುವುದರ ವಿರುದ್ಧ ನಿರ್ದೇಶನ ನೀಡುವಂತೆ ಲೋಕ ಪ್ರಹರಿ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು.
ಅಲಹಾಬಾದ್ ಹೈಕೋರ್ಟಿನ ನಿರ್ದೇಶನದ ಹೊರತಾಗಿಯೂ ಉತ್ತರ ಪ್ರದೇಶ ಸರ್ಕಾರವು ’ಮಾಜಿ ಮುಖ್ಯಮಂತ್ರಿಗಳ ವಸತಿ ಮಂಜೂರಾತಿ ನಿಯಮಗಳು, 1997’ ಎಂಬ ಕಾನೂನನ್ನು ರಚಿಸಿ ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದೆ ಎಂದು ಲೋಕ ಪ್ರಹರಿ ಆಪಾದಿಸಿತ್ತು. ಈ ಕಾನೂನು ಸಂವಿಧಾನ ಬಾಹಿರ ಮತ್ತು ಅಕ್ರಮ ಎಂಬುದಾಗಿ ಎನ್ಜಿಒ ಅರ್ಜಿಯಲ್ಲಿ ಪ್ರತಿಪಾದಿಸಿತ್ತು. 2014ರ ನವೆಂಬರ್ 27ರಂದು ವಿಚಾರಣೆ ಬಳಿಕ ತೀರ್ಪನ್ನು ಕಾಯ್ದಿರಿಸಲಾಗಿತ್ತು.
Comments are closed.