ಬೆಂಗಳೂರು, ಆ. ೩- ಮಹದಾಯಿ ಮಧ್ಯಂತರ ತೀರ್ಪು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಿ ಅಮಾಯಕರ ಮೇಲೆ ಹಲ್ಲೆ, ದೌರ್ಜನ್ಯಕ್ಕೆ ಕಾರಣರಾದ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಇಂದು ಇಲ್ಲಿ ಒತ್ತಾಯಿಸಿದ್ದಾರೆ.
ರೈತ ಚಳವಳಿಯನ್ನು ಹತ್ತಿಕ್ಕುವ ಸಂಬಂಧ ಓಂ ಪ್ರಕಾಶ್ ನೇತೃತ್ವದಲ್ಲಿ ನಡೆದ ತೀರ್ಮಾನವೇ ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ಹಲ್ಲೆಗೆ ಕಾರಣ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಗೃಹ ಸಚಿವರ ಮನೆಗೆ ಮುತ್ತಿಗೆ
ರೈತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಇದೇ 6 ರಂದು ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದು, ಹಿರಿಯ ಮುಖಂಡರಾದ ಕಡಿದಾಳ್ ಶಾಮಣ್ಣ, ಡಾ. ಚಿಕ್ಕಸ್ವಾಮಿ, ಹೆಚ್.ಆರ್. ಬಸವರಾಜಪ್ಪ, ಅನುಸೂಯಮ್ಮ, ಬಸವರಾಜು ಮಳಲಿ ಸೇರಿದಂತೆ, ಹಲವರ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗುವುದು ಎಂದರು.
10 ರಂದು ತಿಪಟೂರಿನ ಎಪಿಎಂಸಿ ಯಾರ್ಡ್‌ನಿಂದ ವಿಧಾನಸೌಧಕ್ಕೆ 10 ಸಾವಿರಕ್ಕೂ ಹೆಚ್ಚು ರೈತರು ಮುತ್ತಿಗೆ ಹಾಕಲು ನಿರ್ಧರಿಸಿದ್ದು, 10 ರಂದು ಆರಂಭವಾಗುವ ಪಾದಯಾತ್ರೆ ಸ್ವಾತಂತ್ರ್ಯ ದಿನದಂದು ಬೆಂಗಳೂರು ತಲುಪಲಿದ್ದು, ರೈತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಹಿಂಪಡೆದು, ಜೈಲಿನಲ್ಲಿರುವ ರೈತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಸ್ವಾತಂತ್ರ್ಯೋತ್ಸವಕ್ಕೆ ಅರ್ಥವಿರುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್, ಅಬ್ಬಣ್ಣಿ ಶಿವಪ್ಪ ಸೇರಿದಂತೆ, ಅನೇಕರು ಉಪಸ್ಥಿತರಿದ್ದರು.
Comments are closed.