ಮಂಗಳೂರು,ಆ.3: ನಗರದಲ್ಲಿ ಬಹುಪಯೋಗಿ ಸಾಂಸ್ಕೃತಿಕ ಕೇಂದ್ರವಾಗಿ ಹಜ್ ಭವನ ನಿರ್ಮಾಣ ಮಾಡುವ ರೂಪು ರೇಷೆಗಳನ್ನು ನೀಡಿದಲ್ಲಿ ಸರಕಾರದಿಂದ ಸಕಲ ರೀತಿಯ ನೆರವನ್ನು ಒದಗಿಸುವುದಾಗಿ ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಶನ್ ಬೇಗ್ ಸಾಹೇಬ್ ತಿಳಿಸಿದರು.
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮದೀನಾಕ್ಕೆ ಭಾರತದಿಂದ ಪ್ರಥಮ ಹಜ್ ವಿಮಾನ ಯಾನ ಹೊರಡಲಿದ್ದು, ಬಜಪೆಯ ಹಳೆ ವಿಮಾನ ನಿಲ್ದಾಣದಲ್ಲಿ ವಿಮಾನಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕೆಂಜಾರುವಿನಲ್ಲಿ ನಿವೇಶನವನ್ನು ಕಾದಿರಿಸಲಾಗಿದ್ದು, ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವ ಮೂಲಕ ಜಿಲ್ಲೆಯಲ್ಲಿ ಹಜ್ ಭವನ ನಿರ್ಮಾಣದ ಕನಸನ್ನು ಈಡೇರಿಸಬೇಕೆಂದು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಉಪಸ್ಥಿತರಿದ್ದ ಇತರ ಸಚಿವರು, ಶಾಸಕರು ಆಗ್ರಹಿಸಿದ ಹಿನ್ನೆಲೆಯಲ್ಲಿ ಅವರು ಈ ಭರವಸೆ ನೀಡಿದರು.
ಬಹುತೇಕ ಕಡೆಗಳಲ್ಲಿ ಹಜ್ ಭವನ ಕೇವಲ ಹಜ್ ಯಾತ್ರೆಯ ಸಂದರ್ಭದಲ್ಲಿ ಮಾತ್ರವೇ ಬಳಕೆಯಾಗುತ್ತಿದ್ದು, ಉಳಿದ ಸಂದರ್ಭಗಳಲ್ಲಿ ಅದು ಧೂಳು ತುಂಬುವಂತಹ ಪರಿಸ್ಥಿತಿ ಇದೆ. ಆದ್ದರಿಂದ ಮಂಗಳೂರಿನಲ್ಲಿ ಹಜ್ ಭವನವನ್ನು ಮದುವೆಗೆ ಹೊರತು ಪಡಿಸಿ ಉಳಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಉಪಯೋಗವಾಗುವಂತೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಚಿವ ರೋಶನ್ ಬೇಗ್ ತಿಳಿಸಿದರು.
ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಹಜ್ ಭವನ ಆಗಸ್ಟ್ 27ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಚಿವ ರೋಶನ್ ಬೇಗ್ ಈ ಸಂದರ್ಭ ತಿಳಿಸಿದರು. ರಾಜ, ರಾಣಿಯಾಗಿದ್ದರೂ, ಅದೆಷ್ಟೇ ಶ್ರೀಮಂತನಾಗಿದ್ದರೂ ಹಜ್ಗೆ ತೆರಳುವ ಭಾಗ್ಯ ಸಿಗುವುದು ಅಪರೂಪ. ಹಾಗಾಗಿ ಈ ಅದೃಷ್ಟ ಸಿಕ್ಕಿದವರು ದೇಶದಲ್ಲಿ, ರಾಜ್ಯದಲ್ಲಿ ಮಾತ್ರವಲ್ಲದೆ ಕರಾವಳಿಯಲ್ಲಿ ಶಾಂತಿಯ ವಾತಾವರಣ ನೆಲೆಸುವ ನಿಟ್ಟಿನಲ್ಲಿಯೂ ದುಆ ನೆರವೇರಿಸುವಂತೆ ಅವರು ಮನವಿ ಮಾಡಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ಮಾತನಾಡಿ, ಹಜ್ ಯಾತ್ರೆಗೆ ತೆರಳುವ ಅದೃಷ್ಟ ಅಲ್ಲಾಹುನ ಕೃಪೆ ಇದ್ದಾಗ ಮಾತ್ರ ಸಿಗುತ್ತದೆ. ಯಾತ್ರೆಗೆ ತೆರಳುವ ಸಂದರ್ಭ ಸಣ್ಣ ಪುಟ್ಟ ತೊಂದರೆಗಳಾಗುವ ಸಾಧ್ಯತೆಗಳಿರುವುದರಿಂದ, ಹಜ್ ಯಾತ್ರಿಕರಲ್ಲಿ ತಾಳ್ಮೆ ಅತೀ ಅಗತ್ಯ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಅಭಯಚಂದ್ರ ಜೈನ್, ಶಾಸಕ ಮೊಯ್ದಿನ್ ಬಾವ, ಮೇಯರ್ ಹರಿನಾಥ್ ಮಾತನಾಡಿ ಹಜ್ ಯಾತ್ರಿಕರಿಗೆ ಶುಭ ಹಾರೈಸಿದರು.
ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುವಾದೊಂದಿಗೆ ಪ್ರಥಮ ಹಜ್ ವಿಮಾನ ಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಸಚಿವ ರೋಶನ್ ಬೇಗ್ರವರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜಿ.ಟಿ. ರಾಧಾಕೃಷ್ಣ, ಮುಸ್ಲಿಂ ಸಮುದಾಯದ ಹಿರಿಯ ನಾಯಕರಾದ ಕೆ.ಎಸ್.ಎಂ. ಮಸೂದ್, ದ.ಕ. ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಮನಪಾ ಮುಖ್ಯ ಸಚೇತಕ ಸಶಿಧರ ಹೆಗ್ಡೆ, ಏರ್ ಇಂಡಿಯಾದ ವ್ಯವಸ್ಥಾಪಕ ನಾಗೇಶ್ ಶೆಟ್ಟಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ನಜಿ.ಎ. ಬಾವಾ, ಶಾಹುಲ್ ಹಮೀದ್, ಬಿ.ಎಚ್.ಖಾದರ್, ಮುಹಮ್ಮದ್ ಮೋನು, ಬಿ.ಎ. ಮುಮ್ತಾಝ್ ಅಲಿ, ಸರ್ಫರಾಝ್ ಖಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿದರು. ರಫೀಕ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.
ಭಾರತೀಯ ಹಜ್ ಯಾತ್ರಿಕರಿಗೆ ಸೌದಿಯಲ್ಲಿ ಅತೀ ಗೌರವ: ಸಚಿವ ರೋಶನ್ ಬೇಗ್
ದೇಶ ಹಾಗೂ ವಿದೇಶಗಳಲ್ಲಿ ನಡೆಯುತ್ತಿರುವ ಬಾಂಬ್ ಸ್ಫೋಟ ಪ್ರಕರಣಗಳು, ಭಯೋತ್ಪಾದನಾ ಘಟನೆಗಳನ್ನು ಉಲ್ಲೇಖಿಸಿ ಮಾತನಾಡಿದ ಸಚಿವ ರೋಶನ್ ಬೇಗ್, ಇತರ ಧರ್ಮಗಳಂತೆಯೇ ಇಸ್ಲಾಂನಲ್ಲಿಯೂ ಹಿಂಸೆಯನ್ನು ಹೇಳಿಕೊಡುವುದಿಲ್ಲ. ಇಸ್ಲಾಂ ಧರ್ಮ ಶಾಂತಿಯನ್ನು ಪ್ರತಿಪಾದಿಸುವ ಧರ್ಮ. ಹಿಂಸೆಯಲ್ಲಿ ತೊಡಗಿರುವವರು ಯಾವುದೇ ಕಾರಣಕ್ಕೂ ಇಸ್ಲಾಂ ಧರ್ಮದವರಲ್ಲ ಎಂದರು.
ಹಜ್ ಯಾತ್ರೆಗೆ ತೆರಳುವ ಭಾರತೀಯರನ್ನು ಸೌದಿ ಅರೇಬಿಯಾದ ಜನ ಗೌರವ ಆದರಗಳಿಂದ ಸ್ವಾಗತಿಸುತ್ತಾರೆ. ಪಾಕಿಸ್ತಾನದವರನ್ನು ಕೂಡಾ ಅಲ್ಲಿ ಮೂರು ಮೂರು ಬಾರಿ ತಪಾಸಣೆಗೊಳಪಡುತ್ತಾರೆ. ಅಂತಹ ಗೌರವವನ್ನು ಹೊಂದಿದ ದೇಶ ನಮ್ಮದಾಗಿದೆ ಎಂದು ಸಚಿವ ರೋಶನ್ ಬೇಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ಹಜ್ ಯಾತ್ರೆ ಹಜ್ ಭವನದಿಂದಲೇ ಆಗಲಿ: ಸಚಿವ ರೈ
ಮಂಗಳೂರಿನಲ್ಲಿ ಹಜ್ ಭವನ ಇದ್ದರೆ ಹಜ್ ಯಾತ್ರಿಕರಿಗೆ ಸುಗಮವಾಗಲಿದೆ. ಕೆಂಜಾರುವಿನಲ್ಲಿ ಹಜ್ ಭವನಕ್ಕಾಗಿ ಕಾದಿರಿಸಲಾಗಿರುವ ಸುಮಾರು 2 ಎಕರೆ ಸ್ಥಳದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 10 ಸೆಕೆಂಡ್ಗಳಲ್ಲೇ ತಲುಪಬಹುದಾಗಿದೆ. ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ರೀತಿಯಲ್ಲಿಯೇ ಮಂಗಳೂರಿನಲ್ಲಿಯೂ ಹಜ್ ಭವನ ನಿರ್ಮಾಣವಾಗಿ ಮುಂದಿನ ವರ್ಷದಿಂದ ಹಜ್ ಭವನದ ಮೂಲಕವೇ ಹಜ್ ಯಾತ್ರೆಗೆ ತೆರಳುವ ಅವಕಾಶಕ್ಕೆ ಹಜ್ ಸಚಿವರು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಆಗಸ್ಟ್ 4ರಂದು ಭಾರತದಿಂದ ಹಜ್ಗೆ ಪ್ರಥಮ ವಿಮಾನ ಯಾನ ಆರಂಭ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದ.ಕ. ಮತ್ತು ಉಡುಪಿ ಸೇರಿದಂತೆ ಐದು ಜಿಲ್ಲೆಗಳ ಒಟ್ಟು 628 ಮಂದಿ ಮದೀನಾಕ್ಕೆ ನೇರ ಪ್ರಯಾಣ ಬೆಳೆಸಲಿದ್ದಾರೆ. ಹಜ್ ಯಾತ್ರೆಗೆ ಭಾರತದಿಂದ ಪ್ರಥಮ ವಿಮಾನ ಯಾನ ಆಗಸ್ಟ್ 4ರಂದು ಬೆಳಗ್ಗೆ 11.20ಕ್ಕೆ ಹೊರಡಲಿದೆ.
ವರದಿ ಕೃಪೆ : ವಾರ್ತಾ ಭಾರತಿ
Comments are closed.