ರಾಷ್ಟ್ರೀಯ

ಕನ್ನಡ ವಿರೋಧಿ ಧೋರಣೆ: ವಸುಧೇಂದ್ರ ಅವರ ‘ಐದು ಪೈಸೆ ವರದಕ್ಷಿಣೆ’ ಪುಸ್ತಕವನ್ನು ಕೈಬಿಟ್ಟ ಅಮೆಜಾನ್

Pinterest LinkedIn Tumblr

kindle-bookಕೆಲವು ದಿನಗಳ ಹಿಂದೆಯಷ್ಟೇ ಖ್ಯಾತ ಬರಹಗಾರ ವಸುಧೇಂದ್ರ ಅವರ ಹೊಸ ಪುಸ್ತಕ “ಐದು ಪೈಸೆ ವರದಕ್ಷಿಣೆ” ಯ ಕಿಂಡಲ್ ಆವೃತ್ತಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಅಮೆಜಾನ್ ಕಂಪನಿಯ ಕಿಂಡಲ್ ಡಿವೈಸಿನಲ್ಲಿ ಕನ್ನಡ ಸಪೋರ್ಟ್ ಇಲ್ಲ ಎಂಬ ಕಾರಣದಿಂದ ಅಮೆಜಾನ್ ಐದು ಪೈಸೆ ವರದಕ್ಷಿಣೆ ಪುಸ್ತಕವನ್ನು ಡಿಲೀಟ್ ಮಾಡಿದೆ.

ಅಮೆಜಾನ್‍ನ ಈ ನಡೆಯಿಂದ ನೊಂದು ಕೊಂಡಿರುವ ವಸುಧೇಂದ್ರ ಅವರು ಫೇಸ್‍ಬುಕ್‍ನಲ್ಲಿ ಈ ರೀತಿ ಪೋಸ್ಟ್ ಹಾಕಿದ್ದಾರೆ.
ನನ್ನ ಹೊಸ ಪುಸ್ತಕ “ಐದು ಪೈಸೆ ವರದಕ್ಷಿಣೆ” ಯ ಕಿಂಡಲ್ ಆವೃತ್ತಿ ಮಾಡಿದ್ದೆವಲ್ಲವೆ? ಹಲವಾರು ಜನರು ಅದನ್ನು ಖರೀದಿಸಿ, ಕಿಂಡಲ್ ನಲ್ಲಿ ಕನ್ನಡ ಅಕ್ಷರಗಳನ್ನು ಕಂಡು ಸಂಭ್ರಮ ಪಟ್ಟಿದ್ದರು. ಆದರೆ ಅಮೆಜಾನ್ ಕಂಪನಿಯು ಕನ್ನಡಿಗರ ಆ ಸಂಭ್ರಮಕ್ಕೆ ಕತ್ತರಿ ಹಾಕಿದೆ. “ಸದ್ಯಕ್ಕೆ ನಾವು ಕನ್ನಡ ಭಾಷೆಯನ್ನು ಸಪೋರ್ಟ್ ಮಾಡುವುದಿಲ್ಲ” ಎಂಬ ನೆಪ ಹೇಳಿ, ಆ ಪುಸ್ತಕವನ್ನು ಡಿಲೀಟ್ ಮಾಡಿದೆ. ತುಂಬಾ ಬೇಸರವಾಗುತ್ತಿದೆ. ಹಲವು ಮಾಹಿತಿಯ ಪ್ರಕಾರ ಸದ್ಯದಲ್ಲಿಯೇ ಅಮೆಜಾನ್ ತನ್ನ ಕಿಂಡಲ್ ನಲ್ಲಿ ಐದು ಭಾರತೀಯ ಭಾಷೆಗೆ ಅವಕಾಶ ಕೊಡಲಿದೆಯಂತೆ. ದುರಾದೃಷ್ಟವೆಂದರೆ ಅವುಗಳಲ್ಲಿ ಎಂಟು ಜ್ಞಾನಪೀಠ ಪಡೆದ ಕನ್ನಡವನ್ನು ಅದು ಪರಿಗಣಿಸುತ್ತಿಲ್ಲ. ಕನ್ನಡಿಗರ ಪರವಾಗಿ ಮಾತನಾಡುವವರು ಯಾರು?

ಅಮೆಜಾನ್ ಕಂಪನಿಯ ಕಿಂಡಲ್ ಡಿವೈಸಿನಲ್ಲಿ ಕನ್ನಡ ಸಪೋರ್ಟ್ ಇಲ್ಲ ಅನ್ನುವ ನೆಪ ಹೇಳಿ ವಸುಧೇಂದ್ರ ಅವರ “ಐದು ಪೈಸೆ ವರದಕ್ಷಿಣೆ” ಪುಸ್ತಕವನ್ನು ತೆಗೆದು ಹಾಕಿದ ಸುದ್ದಿ ತಿಳಿದ ವಸಂತ್ ಶೆಟ್ಟಿ ಅಮೆಜಾನ್ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದ್ದಾರೆ. ಅವರ ಕರೆಗೆ ಅಮೆಜಾನ್ ಈ ರೀತಿ ಉತ್ತರಿಸಿದೆ.

ಅಮೆಜಾನ್ : ಕಿಂಡಲ್ ಸಪೋರ್ಟ್ ಕಡೆಯಿಂದ, ಹೇಳಿ ಹೇಗೆ ಸಹಾಯ ಮಾಡಲಿ?
ನಾನು: ನಾನು ಬೆಂಗಳೂರಿನಿಂದ ಕರೆ ಮಾಡುತ್ತಿರುವೆ. ಕಿಂಡಲ್ ಅಲ್ಲಿ ಕನ್ನಡ ಪುಸ್ತಕಗಳು ದೊರೆಯಲು ಶುರುವಾಗಿದೆ ಎಂದು ತಿಳಿದು ಕಿಂಡಲ್ ಮತ್ತು ಪುಸ್ತಕ ಎರಡೂ ಕೊಳ್ಳುವ ಆಲೋಚನೆಯಲ್ಲಿದ್ದೆ. ಆದರೆ ಈಗ ನೋಡಿದರೆ ಪುಸ್ತಕವನ್ನು ತೆಗೆದು ಹಾಕಿ, ಕನ್ನಡ ಭಾಷೆ ಸಪೋರ್ಟ್ ಮಾಡಲ್ಲ ಎಂದು ಅಮೇಜಾನ್ ಹೇಳಿರುವುದನ್ನು ಕೇಳಿ ಬೇಸರದಿಂದ ಕರೆ ಮಾಡಿರುವೆ. ಯಾಕೆ ಹೀಗೆ ಮಾಡಿದ್ದೀರಿ?
ಅಮೆಜಾನ್ : ಅಮೆಜಾನಿನಲ್ಲಿ ಕನ್ನಡ ಸಪೋರ್ಟ್ ಇಲ್ಲ. ಹೀಗಾಗಿ ಅದನ್ನು ತೆಗೆದಿದ್ದೇವೆ.
ನಾನು: ಸಪೋರ್ಟ್ ಇಲ್ಲದೇ ಆ ಪುಸ್ತಕ ನಾಲ್ಕು ದಿನದ ಹಿಂದೆ ಅಮೆಜಾನಿನಲ್ಲಿ ಹೇಗೆ ಬಿಡುಗಡೆ ಆಯ್ತು?
ಅಮೆಜಾನ್: ಸಪೋರ್ಟ್ ಇಲ್ಲ ಸರ್, ಅದಕ್ಕೆ ತೆಗೆಯಾಲಾಯಿತು.
ನಾನು: ಸಪೋರ್ಟ್ ಇಲ್ಲದೇ ಅದು ಅಮೆಜಾನಿನಲ್ಲಿ ಹೇಗಯ್ಯ ಬಂತು? ಹಲವರು ಅದನ್ನು ಖರೀದಿ ಕೂಡ ಮಾಡಿಲ್ಲವೇ?
ಅಮೆಜಾನ್: ಇಲ್ಲ ಅದು ಕೆಲವೇ ಕೆಲ ಪುಟ ಕಾಣಿಸಿದ್ದು. ಉಳಿದ ಪುಟ ಸಪೋರ್ಟ್ ಇಲ್ಲ. ಹೀಗಾಗಿ ಖರೀದಿಸಿದವರಿಗೆ ನಾವು ರಿಫಂಡ್ ಮಾಡುತ್ತಿದ್ದೇವೆ.
ನಾನು: ಅಲ್ಲಯ್ಯ, ಸಪೋರ್ಟ್ ಅಂದ್ರೇನು? ಕಿಂಡಲಿನಲ್ಲಿ ಕನ್ನಡ ಅಕ್ಷರ ಕಾಣಿಸಬೆಕು ಅಲ್ಲವೇ? ಕನ್ನಡ ಅಕ್ಷರ ಕಾಣಿಸದೇ ಹಲವರು ಹೇಗೆ ಖರೀದಿಸಲು ಸಾಧ್ಯ?
ಅಮೆಜಾನ್: ಅದನ್ನೇ ಸರ್ ಹೇಳುತ್ತಿದ್ದೇನೆ. ಸಪೋರ್ಟ್ ಇಲ್ಲ, ಅದಕ್ಕೆ ತೆಗೆದಿದ್ದೇವೆ.
ನಾನು: ಹೇಳಿದ್ದನ್ನೇ ಹೇಳುತ್ತಿದ್ದೀರಲ್ರಿ? ನಾಲ್ಕು ದಿನ ಇದ್ದ ಪುಸ್ತಕ ಇವತ್ತು ಸಪೋರ್ಟ್ ಇಲ್ಲ ಅಂತ ತೆಗೆಯುತ್ತೀನಿ ಅಂತೀರಲ್ಲಾ? ಬುಲ್ ಶಿಟ್.
ಅಮೆಜಾನ್: ನಿಮ್ಮ ಫೀಡ್ ಬ್ಯಾಕ್ ನಮ್ಮ ಕಿಂಡಲ್ ಸಪೋರ್ಟ್ ವಿಭಾಗಕ್ಕೆ ಕಳಿಸುವೆ.
ನಾನು: ಸರಿ, ನಿಮ್ಮ ಹಿರಿಯ ಅಧಿಕಾರಿಯಿಂದ ಒಂದು ಕಾಲ್ ಮಾಡಿಸಿ. ನಾನೊಬ್ಬ ಗ್ರಾಹಕನಾಗಿ ನನ್ನ ಅನಿಸಿಕೆ ತಿಳಿಸಬೇಕು.
ಅಮೆಜಾನ್ : ಇಲ್ಲ ಸರ್, ನಾನು ಪಾಸ್ ಮಾಡುತ್ತೇನೆ. ಕಾಲ್ ಮಾಡಿಸುತ್ತೇನೆ ಅಂತ ಪ್ರಾಮಿಸ್ ಮಾಡಲಾಗಲ್ಲ.
ನಾನು: ನಿಮ್ಮ ಕನ್ನಡ ವಿರೋಧಿ ಧೋರಣೆಯನ್ನು ನಾನು ವಿರೋಧಿಸುತ್ತೇನೆ. ಇದನ್ನು ಸರಿಪಡಿಸದೇ ಹೋದರೆ, ನನ್ನೆಲ್ಲ ಗೆಳಯರಿಗೂ ಅಮೆಜಾನ್ ಅನ್ನು ಬಹಿಷ್ಕರಿಸುವಂತೆ ತಿಳಿಸುತ್ತೇನೆ ಎಂದು ಕರೆ ಮುಗಿಸಿದೆ.

Comments are closed.