ಎರಡು ವರ್ಷಗಳ ಹಿಂದಷ್ಟೇ ಕಾಲಿವುಡ್ ನಿರ್ದೇಶಕ ಎ.ಎಲ್ ವಿಜಯ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಭಾರತದ ಹಾಟ್ ನಟಿ ಅಮಲಾ ಪೌಲ್ ಈಗ ಡೈವೋರ್ಸ್ ಹಾದಿಯಲ್ಲಿದ್ದು, ಇದಕ್ಕೆ ಸಿನಿಮಾ ವೃತ್ತಿ ಜೀವನ ಕಾರಣ ಎಂಬ ಊಹಾಪೋಹಗಳಿಗೆ ಸ್ವತಃ ಪತಿ ವಿಜಯ್ ತೆರೆ ಎಳೆಯಲು ಯತ್ನಿಸಿದ್ದಾರೆ.
ನಾನು ಮತ್ತು ಅಮಲಾ ಪೌಲ್ ಬೇರೆ ಆಗುತ್ತಿರುವ ಕುರಿತು ಊಹಾಪೋಹ ಸುದ್ದಿಗಳನ್ನು ಸಾಕಷ್ಟು ನೋಡಿದ್ದೇನೆ, ಓದಿದ್ದೇನೆ. ನಾನು ಮತ್ತು ಅಮಲಾ ದೂರ ಆಗಲು ನಿರ್ಧರಿಸಿರುವುದು ಮಾತ್ರ ಸತ್ಯ. ಬಾಕಿ ಎಲ್ಲಾ ಸುಳ್ಳು ಅಂತ ನಾನು ಮೊದಲು ಸ್ಪಷ್ಟಪಡಿಸುತ್ತೇನೆ. ಅಮಲಾ ಮತ್ತು ಆಕೆಯ ಆಯ್ಕೆಗೆ ನಾನು ಸ್ವಾತಂತ್ರ್ಯ ನೀಡಿದ್ದೇನೆ. ಚಿತ್ರರಂಗದಲ್ಲಿ ಮುಂದುವರಿಯುವ ಬಗ್ಗೆ ಅಮಲಾ ನಿರ್ಧಾರ ಮಾಡಿದಾಗ, ನಾನು ಸಪೋರ್ಟ್ ಮಾಡಿದ್ದೆ. ಮದುವೆ ನಂತರ ಕೂಡ ಆಕೆ ನಟಿಸುತ್ತಿದ್ದರು. ಚಿತ್ರರಂಗದಲ್ಲಿ ಅಮಲಾ ಮುಂದುವರಿಯಲು ನಾನು ಮತ್ತು ನನ್ನ ಕುಟುಂಬ ಬಿಡುತ್ತಿಲ್ಲ ಎಂಬ ಸುದ್ದಿ ಶುದ್ಧ ಸುಳ್ಳು ಎಂದಿದ್ದಾರೆ.
ನನಗಿರುವ ಸಾಮಾಜಿಕ ಜವಾಬ್ದಾರಿ ಬಗ್ಗೆ ಅರಿವಿದೆ. ಇಲ್ಲಿಯವರೆಗೂ ನಾನು 9 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆ ಎಲ್ಲಾ ಚಿತ್ರಗಳಲ್ಲೂ ನಾನು ಹೆಣ್ಣಿಗೆ ಉತ್ತಮ ಸ್ಥಾನ-ಮಾನ ನೀಡಿರುವುದರಲ್ಲೇ, ನಾನು ಹೆಣ್ಣಿಗೆ ನೀಡುವ ಗೌರವ ಎಂಥದ್ದು ಎಂಬುದು ಸೂಚಿಸುತ್ತೆ. ನಾವಿಬ್ಬರು ಬೇರೆ ಆಗಲು ಕಾರಣ ಏನು ಎಂಬುದು ನನಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ಬಾಯ್ಬಿಟ್ಟು ಹೇಳುವಂತೆ ನನ್ನ ಸ್ನೇಹಿತರು, ಚಿತ್ರರಂಗದ ಹಿತೈಷಿಗಳು ಹಾಗೂ ಮಾಧ್ಯಮ ಗೆಳೆಯರು ಸಲಹೆ ನೀಡಿದ್ರು. ಆದ್ರೆ, ನನ್ನ ಖಾಸಗಿ ವಿಚಾರವನ್ನ ಪಬ್ಲಿಕ್ ಮಾಡುವುದು ನನಗೆ ಇಷ್ಟವಿಲ್ಲ.
ಕುಟುಂಬದಲ್ಲಿ ಆಗಿರುವ ಕೆಲ ಮನಸ್ತಾಪಗಳಿಂದ ನನ್ನ ತಂದೆಗೂ ನೋವಾಗಿದೆ. ಅದನ್ನೇ ಅವರು ತಮಿಳು ವಾಹಿನಿಯೊಂದರಲ್ಲಿ ಹೇಳಿಕೊಂಡಿದ್ದಾರೆ (ಹೇಳಿಕೆ ನೀಡಿ ಅಂತ ಬಲವಂತ ಮಾಡಿದಾಗ). ದುರಾದೃಷ್ಟವಶಾತ್, ಎಲ್ಲಾ ಅಂತೆ-ಕಂತೆಗಳಿಗೆ ಅದೇ ಹೇಳಿಕೆ ಪುಷ್ಟಿ ನೀಡುವಂತೆ ಆಗಿದೆ ಎಂದು ನಿರ್ದೇಶಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮದುವೆಯ ಅನುಬಂಧದಲ್ಲಿ ಸತ್ಯ ಹಾಗೂ ನಂಬಿಕೆ ಮುಖ್ಯ. ಅದಕ್ಕೆ ವಂಚನೆ ಆದಾಗ ಸಂಬಂಧಕ್ಕೆ ಬೆಲೆ ಇರುವುದಿಲ್ಲ. ನನ್ನ ಪ್ರೀತಿ, ಮದುವೆ ಹೀಗೆ ಮುಕ್ತಾಯ ಆಗುತ್ತೆ ಅಂತ ನಾನು ಎಂದೂ ಯೋಚಿಸಿರಲಿಲ್ಲ. ಆದರೂ, ಹೌದು. ಇಂದು ನನಗೆ ಬೇರೆ ದಾರಿ ಇಲ್ಲ. ಮನಸ್ಸಿನಲ್ಲಿ ದುಗುಡ ತುಂಬಿಕೊಂಡು, ಬದುಕಿನಲ್ಲಿ ಮುನ್ನಡೆಯಲು ನಾನು ನಿರ್ಧರಿಸಿದ್ದೇನೆ. ಸತ್ಯ ತಿಳಿಯದೆ ‘ಲಿಂಗ ತಾರತಮ್ಯ’ ಅಂತ ಕೆಲ ಮಾಧ್ಯಮಗಳು ಮಾಡುತ್ತಿರುವ ಸುದ್ದಿ ವೈಯುಕ್ತಿಕವಾಗಿ ನೋವುಂಟು ಮಾಡಿದೆ ಯಾವುದೇ ಊಹಾಪೋಹಗಳಿಗೆ ಮಾನ್ಯತೆ ಕೊಡದೆ, ನನ್ನ ವೈಯುಕ್ತಿಕ ಜೀವನಕ್ಕೆ ಬೆಲೆ ಕೊಟ್ಟರೆ, ನಿಮಗೆಲ್ಲಾ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
Comments are closed.