ಹೈದರಾಬಾದ್: ಸ್ವಯಂ ಘೋಷಿತ ಗೋ ರಕ್ಷಕರ ಬಗ್ಗೆ ನೀಡಿರುವ ಹೇಳಿಕೆಯನ್ನು ಕಾರ್ಯಗತಗೊಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಂಐಎಂ ಪಕ್ಷದ ಮುಖಂಡ ಅಸಾವುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ.
ಗೋರಕ್ಷಕರ ವಿಷಯದ ಬಗ್ಗೆ ಹೇಳಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ವಿಳಂಬ ಮಾಡಿದ್ದನ್ನು ಪ್ರಶ್ನಿಸಿರುವ ಅಸಾವುದ್ದೀನ್ ಓವೈಸಿ, ಕೇವಲ ಹೇಳಿಕೆಗಳು ಮಾತ್ರ ಸಾಕಾಗುವುದಿಲ್ಲ, ಹೇಳಿಕೆಯನ್ನು ಕಾರ್ಯಗತಗೊಳಿಸಿ ಎಂದು ಆಗ್ರಹಿಸಿದ್ದಾರೆ. ಅಲ್ಪಸಂಖ್ಯಾತರು, ದಲಿತರಲ್ಲಿ ಅಭದ್ರತೆಯ ಭಾವನೆಯನ್ನು ತೆಗೆದುಹಾಕಲು ಪ್ರಧಾನಿ ಮೋದಿ ಹೇಳಿಕೆಯನ್ನು ಕಾರ್ಯಗತಗೊಳಿಸಬೇಕಾಗುತ್ತದೆ ಎಂದಿದ್ದಾರೆ.
ಗುಜರಾತ್ ನಲ್ಲಿ ದಲಿತರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ ವಿಡಿಯೋ ದೇಶದ ಪ್ರತಿಯೊಂದು ಮನೆಗೂ ತಲುಪಿದೆ. ದಲಿತ ಸಮಾಜ ಹಾಗು ಜಾತ್ಯಾತೀತ ಜನರು ಇದನ್ನು ಪ್ರತಿಭಟಯಿಸಿದ್ದಾರೆ. ಪರಿಣಾಮ ಈ ಬಗ್ಗೆ ಪ್ರತಿಕ್ರಿಯೆ ನೀಡಲೇಬೇಕಾದ ಒತ್ತಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಂಟಾಗಿದೆ ಎಂದು ಅಸಾವುದ್ದೀನ್ ಓವೈಸಿ ಅಭಿಪ್ರಾಯಪಟ್ಟಿದ್ದಾರೆ.
ಸ್ವಯಂ ಘೋಷಿತ ಗೋ ರಕ್ಷಕರ ವಿರುದ್ಧ ಎಲ್ಲಾ ರಾಜ್ಯ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಕ್ಕೆ ಈ ಮೂಲಕ ಅಸಾವುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.
Comments are closed.