ಕರ್ನಾಟಕ

ರಾಕೇಶ್ ಸಾವಿನ ಗುಂಗು: ತೋಟದ ಮನೆಯಲ್ಲಿ ಉತ್ತರಕ್ರಿಯೆ

Pinterest LinkedIn Tumblr

rakesh.jpgaaaaaaaaaaaaಟೀ ಕಾತೂರು(ಮೈಸೂರು), ಆ. ೧೧- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಂದಿನ ತೋಟದ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಬಂಧು ಮಿತ್ರರ ಕಣ್ಣೀರು ಬತ್ತಿ ಹೋಗಿದೆ. ಹಿತೈಷಿಗಳ ಸುತ್ತಮುತ್ತಲಿನ ಗ್ರಾಮಸ್ಥರ ಮುಖದಲ್ಲಿ ಒಂದು ರೀತಿ ನಿರಾಶೆ, ನಿಸ್ಸಾಹಯಕ ಭಾವ ಎದ್ದು ಕಾಣುತ್ತಿತ್ತು. ಇಂದು ಇಲ್ಲಿನ ತೋಟದ ಮನೆಯಲ್ಲಿ ನ‌ಡೆದ ಸಿದ್ದರಾಮಯ್ಯ ಪುತ್ರ ರಾಕೇಶ್ ಅವರ 13ನೇ ದಿನದ ಕಾರ್ಯ(ಉತ್ತರ ಕ್ರಿಯಾದಿ) ಸಂದರ್ಭದಲ್ಲಿ ಕಂಡುಬಂದ ದೃಶ್ಯಗಳಿವು.

ರಾಕೇಶ್ ಸಿದ್ದರಾಮಯ್ಯನವರ ಉತ್ತರ ಕ್ರಿಯಾದಿ ಕಾರ್ಯ ಇಂದು ಬೆಳಗ್ಗಿನಿಂದಲೇ ಆರಂಭವಾಗಿದ್ದು, 30ಕ್ಕೂ ಹೆಚ್ಚು ಅರ್ಚಕರು, ಪಂಡಿತರು ಇಲ್ಲಿಯ ತೋಟದ ಮನೆಯಲ್ಲಿ ಮಂತ್ರ ಪಠಣ ಪೂಜೆ ನೆರವೇರಿಸಿದರು.

ರಾಕೇಶ್ ಪುತ್ರ, ಪತ್ನಿ ಸ್ಮಿತಾ, ಸಿದ್ದರಾಮಯ್ಯನವರ ಪತ್ನಿ ಹಾಗೂ ಇನ್ನೊಬ್ಬ ಪುತ್ರ ಡಾ. ಯೋಗೇಂದ್ರ ಪೂಜಾ ವಿಧಿ ವಿಧಾನ ಕಾರ್ಯದಲ್ಲಿ ಭಾಗವಹಿಸಿದ್ದರು. ನಂತರ ಒಂದು ಆಕಳು ಹಾಗೂ ಎರಡು ಕರುಗಳ ಗೋದಾನ ಮಾ‌ಡಿದರು. ಬೆಳಿಗ್ಗೆ ಸಮಾಧಿಗೆ ಪೂಜೆ ನೆರವೇರಿಸಿದ ಅರ್ಚಕರ ತಂಡ, ನಂತರ ತೋಟದ ಮನೆಯಲ್ಲಿ ರಾಕೇಶ್‌ರ ಭಾವಚಿತ್ರ ಹಾಗೂ ವೆಂಕಟರಮಣ ಮೂರ್ತಿ ಇಟ್ಟು ಪೂಜೆ ಮಾಡಿದರು.

ತೋಟದ ಹೊರಗಡೆ ಸುಮಾರು 2 ಸಾವಿರ ಚದರಡಿ ಜಾಗದಲ್ಲಿ ಹಾಕಿದ್ದ ದೊಡ್ಡ ಶಾಮಿಯಾನದಲ್ಲಿ ಊಟದ ವ್ಯವಸ್ಥೆ ಮಾಡಿದ್ದು, ಸುಮಾರು 2 ಸಾವಿರ ಜನರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ತೋಟದ ಒಳಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿತ್ತು, ಕೇವಲ ಸಿದ್ದರಾಮಯ್ಯನವರ ಕುಟುಂಬಸ್ಥರು ಹಾಗೂ ಆಪ್ತ ಬಂಧುಗಳಿಗೆ ಮಾತ್ರ ಒಳಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸಿದ್ದರಾಮಯ್ಯನವರು ಅನ್ನಸಂತರ್ಪಣೆ ಜಾಗದಲ್ಲಿ ನಿಂತು ಬರುವ ಬಂಧು ಮಿತ್ರರನ್ನು ಭೇಟಿ ಮಾಡುತ್ತಿದ್ದರು. ಮತ್ತೊಂದೆಡೆ ಸಂಗೀತ ಮೇಳದವರಿಂದ ಭಜನೆ ಆಯೋಜಿಸಲಾಗಿತ್ತು.

ಛಾಯಾಗ್ರಹಣ ನಿಷಿದ್ಧ
ಸಿದ್ದರಾಮಯ್ಯನವರ ತೋಟದ ಒಳಗೆ ಛಾಯಾಗ್ರಹಣ ನಿಷೇಧಿಸಲಾಗಿದ್ದು, ಮೊಬೈಲ್‌ನಲ್ಲೂ ಸಹ ಫೋಟೊ ತೆಗೆಯದಂತೆ ಅತ್ಯಂತ ಜಾಗೃತೆ ವಹಿಸಲಾಗಿತ್ತು. ಸಿದ್ದರಾಮಯ್ಯನವರ ಆಪ್ತರು ಹಾಗೂ ಮುಫ್ತಿಯಲ್ಲಿದ್ದ ಪೊಲೀಸರು ಸಾರ್ವಜನಿಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಮೊಬೈಲ್ ಮೂಲಕ ಫೋಟೊ ತೆಗೆದವರನ್ನು ಸಹ ಹಿಡಿದು ಫೋಟೋ ಅಳಿಸುವಂತೆ ಒತ್ತಾಯಿಸುತ್ತಿರುವುದು ಕಂಡುಬಂತು. ಇದೊಂದು ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಛಾಯಾಗ್ರಹಣಕ್ಕೆ ಅವಕಾಶ ನೀಡಲಿಲ್ಲ. ಇನ್ನು ಮಾಧ್ಯಮದವರನ್ನೂ ಸುಮಾರು 3 ಕಿ.ಮೀ. ದೂರದಲ್ಲೇ ತಡೆಯುತ್ತಿದ್ದು, ಮಾಧ್ಯಮ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಪೊಲೀಸ್ ಸರ್ಪಗಾವಲನ್ನು ಮಾಡಲಾಗಿತ್ತು.

Comments are closed.