ಕರ್ನಾಟಕ

ತಮಿಳುನಾಡಿಗೆ ಕನ್ನಡಿಗ ರಾಜ್ಯಪಾಲ…

Pinterest LinkedIn Tumblr

shankaramurthyಬೆಂಗಳೂರು, ಆ. ೧೧- ರಾಜ್ಯ ವಿಧಾನಪರಿಷತ್ತಿನ ಸಭಾಪತಿಯಾಗಿರುವ ಡಿ.ಎಚ್. ಶಂಕರಮೂರ್ತಿ ಸದ್ಯದಲ್ಲೇ ರಾಜ್ಯಪಾಲರಾಗಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿಯ ಹಿರಿಯ ನಾಯಕರೂ ಆಗಿರುವ ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರನ್ನು ತಮಿಳುನಾಡು ಇಲ್ಲವೆ ತೆಲಂಗಾಣ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಕೆಲ ದಿನಗಳ ಹಿಂದೆ ದೆಹಲಿಗೆ ಹೋಗಿದ್ದ ಡಿ.ಎಚ್.ಶಂಕರಮೂರ್ತಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರನ್ನು ಭೇಟಿ ಮಾಡಿ ರಾಜ್ಯಪಾಲರ ಹುದ್ದೆಯ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಸಭಾಪತಿ ಸ್ಥಾನಕ್ಕೆ ಸಂಚಕಾರ
ವಿಧಾನಪರಿಷತ್ತಿನ ಹಾಲಿ ಸಭಾಪತಿಯಾಗಿರುವ ಶಂಕರಮೂರ್ತಿ ಅವರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರನ್ನು ತರಲು ತೆರೆಮರೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಡೆಸಿರುವ ಪ್ರಯತ್ನವನ್ನು ಅರಿತಿರುವ ಶಂಕರಮೂರ್ತಿ ಅವರು ಸಭಾಪತಿ ಸ್ಥಾನದಿಂದ ಇಳಿಯುವ ಮುನ್ನವೇ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರಾಗಲು ಪ್ರಯತ್ನ ನಡೆಸಿರುವ ಶಂಕರಮೂರ್ತಿ ಅವರು ಈ ಸಂಬಂಧ ವರಿಷ್ಠ ನಾಯಕರನ್ನು ಭೇಟಿ ಮಾಡಿ ಚರ್ಚೆ ಸಹ ನಡೆಸಿದ್ದಾರೆ.

ಆರ್‌ಎಸ್‌ಎಸ್ ನಾಯಕರ ಜತೆ ನಿಕಟ ಬಾಂಧವ್ಯ ಹೊಂದಿರುವ ಶಂಕರಮೂರ್ತಿ ಅವರು ಆರ್ಎಸ್ಎಸ್ ಮುಖಂಡರ ಮೂಲಕವು ರಾಜ್ಯಪಾಲರ ಹುದ್ದೆಗೆ ನೇಮಕ ಮಾಡುವಂತೆ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರ ಮೂಲಕ ಒತ್ತಡ ಹಾಕಿಸಿದ್ದಾರೆ ಎನ್ನಲಾಗಿದೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಡಿ.ಎಚ್. ಶಂಕರಮೂರ್ತಿ ಅವರನ್ನು ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಕ ಮಾಡುವ ಮಾತುಗಳು ಕೇಳಿಬಂದಿದ್ದವು. ಆದರೆ ಅದು ಕಾರ್ಯಗತವಾಗಿರಲಿಲ್ಲ. ಈಗ ಶಂಕರಮೂರ್ತಿ ಅವರ ಅದೃಷ್ಟ ಕುಲಾಯಿಸಿದಂತಿದೆ. ಸದ್ಯದಲ್ಲೇ ಅವರು ರಾಜ್ಯಪಾಲರಾಗಿ ನೇಮಕಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ತಮಿಳುನಾಡಿನ ರಾಜ್ಯಪಾಲರಾಗಿರುವ ಕೆ.ರೋಸಯ್ಯ ಅವರು ಈ ತಿಂಗಳ 31ರಂದು ನಿವೃತ್ತಿಯಾಗಲಿದ್ದು, ಶಂಕರಮೂರ್ತಿ ಅವರನ್ನು ತಮಿಳುನಾಡಿನ ರಾಜ್ಯಪಾಲರಾಗಿ ಇಲ್ಲವೇ ಹೊಸದಾಗಿ ರಚನೆಯಾಗಿರುವ ತೆಲಂಗಾಣ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಪಕ್ಷದ ಮೂಲಗಳು ಹೇಳಿವೆ.

ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ರಾಜ್ಯಪಾಲರ ನೇಮಕದ ಆದೇಶ ಸದ್ಯದಲ್ಲೇ ಹೊರಬೀಳುವ ಸಾಧ್ಯತೆಗಳು ನಿಚ್ಚಳವಾಗಿವೆ.

Comments are closed.