ಕರಾವಳಿ

ಬೆನ್ನುಮೂಳೆಯ ಬಿಲ್ಲೆ ಅಥವಾ ಡಿಸ್ಕ್ ಜಾರುವಿಕೆ ಬಗ್ಗೆ ತಿಳಿದಿದಿಯೇ ….?

Pinterest LinkedIn Tumblr

back_bone_disc

ಮಂಗಳೂರು:  ಈ ಕಶೇರುಖಂಡಗಳು ಒಂದರ ತುದಿಯಲ್ಲೊಂದು ಜೋಡಣೆಯಾಗಿರುವ 24 ಚಲನಶೀಲ ಖಂಡಗಳು.ಕಶೇರು ಖಂಡಗಳೆಂಬ 33 ಮೂಳೆಗಳಿಂದ ಬೆನ್ನು ಹುರಿಯ ರಚನೆಯಾಗಿದೆ, ಪ್ರತೀ ಕಶೇರುಖಂಡದ ಮಧ್ಯೆ ಚಪ್ಪಟೆ ಬಿಲ್ಲೆಯಾಕಾರದ ಮೃಧ್ವಸ್ಥಿಯ ತಟ್ಟೆ ಇದೆ ಇದಕ್ಕೆ ಬೆನ್ನುಮೂಳೆಯ ಡಿಸ್ಕ್ ಅಥವಾ ಬಿಲ್ಲೆ ಅಥವಾ ಮೆತ್ತೆಗಳು  ಎಂದು ಹೇಳುತ್ತಾರೆ.

ಈ ಡಿಸ್ಕ್ಗಳು ದೃಢವಾದ ರಬ್ಬರಿನಂತಹ ಅಂಗಾಂಶಗಳಿಂದ ರಚಿತವಾಗಿದ್ದು, ಬೆನ್ನುಮೂಳೆಯ ಸುಲಲಿತ, ಸರಾಗ ಚಲನೆಗೆ ಇವು ಅನುವು ಮಾಡಿಕೊಡುತ್ತವೆ, ಬೆನ್ನುಮೂಳೆಯ ಮೇಲೆ ಬೀಳುವ ಹೆಚ್ಚುವರಿ ಒತ್ತಡವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ ಹಾಗೂ ಕಶೇರುಖಂಡಗಳು ಒಂದನ್ನೊಂದು ಉಜ್ಜದಂತೆ ಅಥವಾ ಘರ್ಷಿಸದಂತೆ ತಡೆಯುತ್ತವೆ.

ಡಿಸ್ಕ್ನ ಹೊರಭಾಗದಲ್ಲಿ ದೃಢವಾದ ನಾರಿನಂತಹ ಪಟ್ಟಿ ಇರುತ್ತದೆ, ಇದನ್ನು ಏನ್ಯೂಲಸ್ ಫೈಬ್ರೋಸಸ್ ಎಂದು ಕರೆಯುತ್ತಾರೆ. ಡಿಸ್ಕ್ ಮೃದುವಾದ ಜೆಲ್ಲಿಯಂತಹ ಮಧ್ಯಭಾಗಕ್ಕೆ ನ್ಯೂಕ್ಲಿಯಸ್ ಪಲ್ಪೋಸಸ್ ಎಂದು ಹೆಸರು. ಕಶೇರುಖಂಡಗಳನ್ನು ಆವರಿಸಿರುವ ದೃಢವಾದ ಅಸ್ಥಿಮಜ್ಜೆಗಳು ಬೆನ್ನುಮೂಳೆಗೆ ಹೆಚ್ಚುವರಿ ಆಧಾರವನ್ನು ಒದಗಿಸುತ್ತವೆ. ಮಾತ್ರವಲ್ಲದೆ ಇಲ್ಲಿ ವಿವಿಧ ಸ್ನಾಯುಗಳು ಬೆನ್ನು ಮೂಳೆಯ ವಿವಿಧ ಭಾಗಗಳನ್ನು ಆವರಿಸಿರುತ್ತವೆ. ಮೊಣಕೈ ಹಾಗೂ ಮೊಣಕಾಲಿನ ಸಂಧಿಗಳ ರೀತಿಯಲ್ಲಿ ಬೆನ್ನುಮೂಳೆಯಲ್ಲೂ ಕೆಲವು ನೈಜ ಸಂಧಿಗಳಿವೆ. ಇವುಗಳಿಗೆ ಫ್ಯಾಸೆಟ್ ಸಂಧಿಗಳು ಎಂದು ಹೇಳುತ್ತಾರೆ. ಈ ಫ್ಯಾಸೆಟ್ ಸಂಧಿಗಳು ಕಶೇರುಖಂಡಗಳನ್ನು ಜೋಡಿಸುತ್ತವೆ ಹಾಗೂ ಬೆನ್ನುಮೂಳೆಗೆ ಚಲನಶೀಲತೆಯನ್ನು ಒದಗಿಸುತ್ತವೆ.

ಬೆನ್ನುಮೂಳೆಯು ಒಂದು ಯಾಂತ್ರಿಕ ಅಂಗವಾಗಿದ್ದು, ಇದು ಸನ್ನೆ (ಕಶೇರುಖಂಡ), ತಿರುಗಣೆ(ಬಿಲ್ಲೆ ಹಾಗೂ ಸಂಧಿಗಳು) ಸಹನಶೀಲ ನಿರ್ಬಂಧಕ(ಅಸ್ಥಿಮಜ್ಜೆಗಳು) ಹಾಗೂ ಕ್ರಿಯಾಶೀಲ (ಸ್ನಾಯುಗಳು) ಎಂಬ ಅಂಗಾಂಶಗಳ ಒಂದು ಸಂಕೀರ್ಣ ಸುಸಂಬದ್ಧ ರೀತಿಯ ಸಂಯೋಜನಾ ಜೋಡಣೆಯಾಗಿರುತ್ತದೆ.

ಬೆನ್ನು ಹುರಿಗೆ ರಕ್ಷಣೆ ಒದಗಿಸುವ ರೀತಿಯಲ್ಲಿ ಬೆನ್ನು ರಚನೆಗೊಂಡಿರುತ್ತದೆ. ಬೆನ್ನು ಹುರಿ ಅಂದರೆ ಉದ್ದನೆಯ, ತೆಳುವಾದ, ಅಸ್ಥಿರಜ್ಜುಗಳಿಂದಾದ-ಮತ್ತು ಪಕ್ಕೆಲುಬಿನ ಹಂದರದ ನಡುವೆ ಬಿಗಿದಿರುವ ಸಂರಚನೆ. ಬೆನ್ನು ಮೂಳೆಗೆ ಅದರದೇ ಆದ ಆಂತರಿಕ ಸಾಮರ್ಥ್ಯ ಇದ್ದು, ಇದು ಹೊಂದಿರುವ ಯಾಂತ್ರಿಕ ಸಾಮರ್ಥ್ಯದ ಬಹು ಅಂಶವು ವಿಶೇಷವಾಗಿ ಅಭಿವೃದ್ಧಿಗೊಂಡಿರುವ ಚಾಲಕಶಕ್ತಿಯನ್ನು ಹೊಂದಿರುವ ನರ-ಸ್ನಾಯುಗಳ ನಿಯಂತ್ರಕ ವ್ಯವಸ್ಥೆಯಿಂದ ಬರುತ್ತದೆ.

ಬೆನ್ನುಮೂಳೆಯು, ನ್ಯೂರಲ್ ಫಾರಾಮಿನಾ ಎಂಬ ತೆರಪಿನ ಮೂಲಕ ಹಾಯುವ 31 ಜೊತೆ ನರದ ಬೇರುಗಳನ್ನು ಒಳಗೊಂಡಿರುವ ಬೆನ್ನು ಹುರಿಗೆ ರಕ್ಷಣೆ ನೀಡುವ ರೀತಿಯಲ್ಲಿ ವಿನ್ಯಾಸಗೊಂಡಿರುತ್ತದೆ. ಬೆನ್ನು ಹುರಿಯು ಮೆದುಳಿನಿಂದ ಬರುವ ನರಗಳ ಸಂರಚನೆಯನ್ನು ಹೊಂದಿದ್ದು, ಬೆನ್ನು ಮೂಳೆಯಿಂದ ಆವೃತ-ರಕ್ಷಣೆಯನ್ನು ಹೊಂದಿರುವ ಅಂಗ-ಭಾಗ. ಬೆನ್ನು ಹುರಿಯಿಂದ ಬರುವ ನರಗಳು ಕಶೇರುಖಂಡಗಳ ನಡುವಿನಿಂದ ಹಾದು ದೇಹದ ವಿವಿಧ ಭಾಗಗಳಿಂದ ಸಂದೇಶಗಳನ್ನು ಪಡೆಯುವ ಮತ್ತು ರವಾನಿಸುವ ಕಾರ್ಯವನ್ನು ನಿರ್ವಹಿಸುತ್ತವೆ.

ಡಿಸ್ಕ್ ಹೊರಚಾಚುವುದು ಅಥವಾ ಡಿಸ್ಕ್ ಜಾರುವಿಕೆ ಅಸಮರ್ಪಕ ಭಂಗಿ, ಬಹಳ ಕಾಲ ಕುಳಿತುಕೊಂಡಿರುವುದು, ಆಗಾಗ ಬಾಗುವುದು, ಕೆಳಬೆನ್ನು ಹಾಗೂ ಕುತ್ತಿಗೆಯ ಮೇಲೆ ಬೀಳುವ ಹಲವು ರೀತಿಯ ಒತ್ತಡಗಳ ಕಾರಣದಿಂದ ಬೆನ್ನು ನೋವು ಬಾಧಿಸುತ್ತದೆ. ಈ ಹಿಂದೆಯೇ ಹೇಳಿದಂತೆ ಬೆನ್ನು ಮೂಳೆಯ ಡಿಸ್ಕ್ ಅಥವಾ ಬಿಲ್ಲೆಯ ಹೊರಕವಚದಲ್ಲಿ ನಾರಿನ ಪಟ್ಟಿ ಇದ್ದು ಮಧ್ಯದಲ್ಲಿ ಜೆಲ್ಲಿಯಂತಹ ಅಂಶವಿರುತ್ತದೆ. ಹೊರಪಟ್ಟಿಯು ಮಧ್ಯದ ಮೃದು, ಜೆಲ್ಲಿಯಂತಹ ಅಂಶವನ್ನು ಹಿಡಿದಿಡುತ್ತದೆ.

ಕೆಲವು ಬಾರಿ ಡಿಸ್ಕ್ ಹೊರಪಟ್ಟಿಯು ದುರ್ಬಲವಾಗಿ, ಅದರಲ್ಲಿ ಸಣ್ಣ ಪುಟ್ಟ ಬಿರುಕುಗಳು ಮೂಡುತ್ತವೆ ಮತ್ತು ಈ ಬಿರುಕುಗಳ ಮೂಲಕ ಮಧ್ಯದಲ್ಲಿರುವ ಜೆಲ್ಲಿ ಅಂಶವು ಹೊರ ಬರುತ್ತದೆ. ಇದಕ್ಕೆ ಡಿಸ್ಕ್ ಪ್ರೊಲ್ಯಾಪ್ಸ್ ಅಥವಾ ಬೆನ್ನು ಮೂಳೆಯ ಡಿಸ್ಕ್ ಜಾರುವುದು ಎಂದು ಹೇಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಡಿಸ್ಕಿನ ಕೇಂದ್ರಭಾಗವು ಹಿಂಭಾಗದಿಂದ ಹೊರಚಾಚುತ್ತದೆ. ಹಾಗೂ ಬೆನ್ನು ಮೂಳೆಯ ನರ ಅಂಗಾಂಶಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ನರಗಳ ಬೇರುಗಳು ಹಾಗೂ ಇನ್ನಿತರ ಒಳ ಅಂಗಾಂಶಗಳ ಮೇಲೆ ಬೀಳುವ ಒತ್ತಡದ ಕಾರಣದಿಂದ ಕಾಲುಗಳಲ್ಲಿ ನೋವು, ಪಾದ ಅಥವಾ ಕಾಲುಗಳ ಸಂವೇದನೆಯಲ್ಲಿ ವ್ಯತ್ಯಾಸವಾಗುವುದು ಹಾಗೂ ಸ್ನಾಯುಗಳು ದುರ್ಬಲವಾಗುಂತಹ ತೊಂದರೆಗಳು ಉಂಟಾಗುತ್ತವೆ.

ಬೆನ್ನುಮೂಳೆಯ ಬಿಲ್ಲೆ ಅಥವಾ ಡಿಸ್ಕ್ ಜಾರುವಿಕೆಯ ಲಕ್ಷಣಗಳು
1..ಬೆನ್ನುಮೂಳೆಯ ಬಿಲ್ಲೆ ಅಥವಾ ಡಿಸ್ಕ್ ಜಾರುವ ತೊಂದರೆ ಇರುವವರಲ್ಲಿ ಮೂರು ವಿಧದ ಲಕ್ಷಣಗಳು, ಬೇರೆ ಬೇರೆಯಾಗಿ, ವಿವಿಧ ಪ್ರಮಾಣ ಮತ್ತು ಸಂಯೋಜನೆಗಳಲ್ಲಿ ಕಾಣಿಸಿಕೊಳ್ಳಬಹುದು.
2.ಡಿಸ್ಕ್ ಹೊರಚಾಚಿರುವ ಭಾಗದ ಕೆಳಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುವುದು
3..ಸಂಕುಚಿತಗೊಂಡಿರುವ ನರದ ಹಾದಿಯುದ್ದಕ್ಕೂ ಅಂದರೆ ಪೃಷ್ಠದ ಕೆಳಭಾಗ, ಸೊಂಟ ಹಾಗೂ ಕಾಲಿನ ಉದ್ದಕ್ಕೂ ನೋವು ಕಾಣಿಸಿಕೊಳ್ಳುವುದು. ಈ ನೋವಿಗೆ ಸಯಾಟಿಕ ಎಂದು ಹೇಳುತ್ತಾರೆ.
4.ಸಂಕುಚನಗೊಂಡ ನರಗಳ ಚಟುವಟಿಕೆಯಲ್ಲಿ ಆಗುವ ವ್ಯತ್ಯಾಸದಿಂದಾಗಿ, ಕಾಲುಗಳು ಜುಮುಗುಡುವುದು, ಜಡವಾಗು ವುದು, ಕಾಲು, ಪಾದಗಳ ಸ್ನಾಯುಗಳು ದುರ್ಬಲವಾಗುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳಬಹುದು.
5.ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ ನರಗಳಿಗೆ ಶಾಶ್ವತ ಹಾನಿಯಾಗುವುದು ಮಾತ್ರವಲ್ಲದೆ ಲಕ್ವಾ ಉಂಟಾಗುವ ಸಾಧ್ಯತೆಯೂ ಇದೆ.ಸಯಾಟಿಕ ಬೆನ್ನು ನೋವು ಅಂದರೆ ಇದರಲ್ಲಿ, ಬೆನ್ನಿನಿಂದ ಪೃಷ್ಠ ಭಾಗದ ಕಡೆಗೆ ಹಾಗೂ ಕಾಲಿನ ಕೆಳಭಾಗಕ್ಕೆ ಮತ್ತು ಪಾದಗಳಿಗೆ ನೋವು ಹರಡುವುದು. ಬೆನ್ನನ್ನು ಮುಂದಕ್ಕೆ ಬಾಗಿಸುವುದು, ಅಸಮರ್ಪಕ ಭಂಗಿ, ಕೆಮ್ಮು ಹಾಗೂ ಸೀನುವುದರಿಂದ ನೋವು ಹೆಚ್ಚಾಗಬಹುದು.

ಡಿಸ್ಕ್ ಹೊರಚಾಚುವಿಕೆಯು ವಿವಿಧ ಹಂತ
1.ಡಿಸ್ಕ್ ಉಬ್ಬಿಕೊಳ್ಳುವುದು – ಡಿಸ್ಕಿನ ಒಳಭಾಗದ ಜೆಲ್ಲಿಯ ಅಂಶವು ಹೊರಮೈಯ ದುರ್ಬಲ ನಾರು ಪಟ್ಟಿಯನ್ನು ಮೀರಿ ಉಬ್ಬಿಕೊಳ್ಳುವುದು.
2.ಡಿಸ್ಕ್ ಹೊರಚಾಚುವುದು: ಇಲ್ಲಿ ಒಳಭಾಗದ ಜೆಲ್ಲಿಯ ಸ್ವಲ್ಪ ಅಂಶವು ಹೊರಮೈಯ ನಾರು ಪಟ್ಟಿಯ ಛಿದ್ರಗೊಂಡ ಬಿರುಕುಗಳ ಮೂಲಕ ಹೊರಬರುವುದು.
3.ಡಿಸ್ಕ್ ಹೊರತಳ್ಳುವುದು : ಈ ಹಂತದಲ್ಲಿ ಬಹು-ಪಾಲು ಜೆಲ್ಲಿಯ ಅಂಶವು ನಾರುಪಟ್ಟಿಯ ಮೂಲಕ ಹೊರಬಂದು, ಬೆನ್ನುಮೂಳೆಯ ನರಗಳಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ ಅಥವಾ ಬೆನ್ನುಮೂಳೆಯ ನರಗಳ ಸಂಕುಚನೆಗೆ ಕಾರಣವಾಗುತ್ತವೆ.
4.ಡಿಸ್ಕ್ ಪ್ರತ್ಯೇಕವಾಗುವಿಕೆ – ಇಲ್ಲಿ ಜೆಲ್ಲಿಯ ಒಂದು ಸಣ್ಣ ತುಂಡು, ಮೂಲ ಅಂಶದಿಂದ ಪ್ರತ್ಯೇಕವಾಗಿ, ಹೊರಬಂದು ಮೂಳೆಯ ನಾಳದ ಒಳಭಾಗದಲ್ಲಿ ಸ್ವತಂತ್ರವಾಗಿರುತ್ತದೆ.

ಡಿಸ್ಕ್ ಜಾರುವಿಕೆಯ ಈ ವಿವಿಧ ಹಂತಗಳು ಹಾಗೂ ಬೆನ್ನು ಮೂಳೆಯ ನರಗಳ ಸಂಕುಚನೆಯ ತೀವ್ರತೆಯನ್ನು ಆಧರಿಸಿಕೊಂಡು, ಡಿಸ್ಕ್ ಜಾರುವಿಕೆಯ ತೊಂದರೆಯ ತೀವ್ರತೆಯಲ್ಲಿ, ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗಬಹುದು. ಡಿಸ್ಕ್ ಜಾರುವಿಕೆಯ ತೀವ್ರ ಪ್ರಕರಣಗಳಲ್ಲಿ ಸಂಪೂರ್ಣ ಡಿಸ್ಕ್ ಹೊರಜಾರಿ ನರಗಳ ಬೇರುಗಳನ್ನು ಒತ್ತುತ್ತಿರುತ್ತದೆ ಈ ಉಲ್ಬಣಾವಸ್ಥೆಗೆ ಕ್ವಾಡಾ-ಇಕ್ವಿನಾ ಕಾಯಿಲೆ ಎಂದು ಹೆಸರು. ಇಲ್ಲಿ ಸಂಕುಚನೆಗೊಂಡಿರುವ ಭಾಗದಿಂದ ಕೆಳಕ್ಕೆ ಸಾಗುವ ಎಲ್ಲಾ ನರಗಳು ಹಾನಿಗೀಡಾಗುತ್ತವೆ, ರೋಗಿಗೆ ವಿವಿಧ ಮಟ್ಟದಲ್ಲಿ ಕಾಲುಗಳಲ್ಲಿ ನಿಶ್ಶಕ್ತಿ ಹಾಗೂ ವಿಸರ್ಜನಾಂಗಗಳ ಮೇಲೆ ಅನಿಯಂತ್ರಣ ಬಾಧಿಸಬಹುದು.

ಅಪಾಯಪೂರಕ ಅಂಶಗಳು ಇಂದು ಕೆಳಬೆನ್ನಿನ ನೋವು ಬಹಳ ಸಾಮಾನ್ಯ ಎನ್ನುವಂತೆ ಅನೇಕ ಜನರನ್ನು ಬಾಧಿಸುತ್ತಿದೆ. ಇವುಗಳಲ್ಲಿ ತೀವ್ರ ಕೆಳಬೆನ್ನು (ಹಠಾತ್ ನೋವು) ನೋವಿನ 20 ಪ್ರಕರಣಗಳಲ್ಲಿ ಡಿಸ್ಕ್ ಜಾರಿರುವ ಹಿನ್ನೆಲೆಯನ್ನು ಹೊಂದಿರುವ ಪ್ರಕರಣ 1ಕ್ಕಿಂತಲೂ ಕಡಿಮೆ ಎನ್ನಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಬೆನ್ನುಮೂಳೆಯ ಚಲನೆಗೆ ಸಂಬಂಧಿಸಿದ ಕಾರಣದಿಂದ ನೋವು ಉಂಟಾಗಿರುತ್ತದೆ.

ಸ್ನಾಯು, ಅಸ್ಥಿಮಜ್ಜೆ ಅಥವಾ ಬೆನ್ನಿನ ರಚನೆಗಳಿಗೆ ಆಗುವ ಸಣ್ಣ ಪುಟ್ಟ ತೊಂದರೆಗಳ ಕಾರಣದಿಂದಾಗಿ ಈ ನೋವು ಕಾಣಿಸಿಕೊಳ್ಳಬಹುದು. ಡಿಸ್ಕ್ ಜಾರುವ ಸಮಸ್ಯೆ ಕಾಣಿಸಿಕೊಳ್ಳುವ ಸಾಮಾನ್ಯ ವಯೋಮಾನ ಅಂದರೆ 30 ರಿಂದ 50 ವರ್ಷಗಳ ನಡುವಿನ ವಯೋಮಾನ. ಈ ತೊಂದರೆಯು ಮಹಿಳೆಯರಿಗಿಂತಲೂ ಪುರುಷರಲ್ಲಿ ಹೆಚ್ಚು ಕಂಡುಬರುತ್ತದೆ.

ಮನುಷ್ಯನ ವಯಸ್ಸು ಹೆಚ್ಚುತ್ತಾ ಹೋದ ಹಾಗೆಲ್ಲಾ ಬೆನ್ನು ಮೂಳೆಯ ಡಿಸ್ಕ್ ಕ್ಷಯಿಸುತ್ತದೆ. ಡಿಸ್ಕ್ನ ಅಂಗಾಂಶಗಳ ಸಹಜ ಕ್ಷಮತೆ ಕುಸಿದ ಹಾಗೆಲ್ಲಾ ಅದು ನಿಧಾನವಾಗಿ ಛಿದ್ರಗೊಳ್ಳಲು ಆರಂಭಿಸುತ್ತದೆ. ಇದು ವಯಸ್ಸಾಗುವಿಕೆಯ ಜೊತೆಗೆ ಸಾಗುವ ಪ್ರಕ್ರಿಯೆ. ಆದರೆ ಒಂದೇ ತೆರನಾದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮತ್ತು ಅದೇ ಪ್ರಮಾಣದ ಭಾರವನ್ನೂ ಎತ್ತುವ ಎಲ್ಲರಲ್ಲಿಯೂ ಡಿಸ್ಕ್ ಜಾರುವ ತೊಂದರೆ ಯಾಕೆ ಕಾಣಿಸಿಕೊಳ್ಳುವುದಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾಂತ್ರಿಕ ಹಾಗೂ ಆನುವಂಶಿಕ ಕಾರಣಗಳೂ ಸೇರಿದಂತೆ ಡಿಸ್ಕ್ನ ಕ್ಷಯಿಸುವಿಕೆಯ ಅಂಶವನ್ನು ಅನೇಕ ಸಂಗತಿಗಳು ನಿರ್ಧರಿಸುತ್ತವೆ.

ಇನ್ನು ಕೆಲವು ಪೂರಕ ಅಂಶಗಳು ಕ್ಷಯಿಸುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳಲು ಕಾರಣವಾಗುತ್ತವೆ. ಅವುಗಳೆಂದರೆ ಅತಿಯಾದ ದೇಹ ತೂಕ, ಅಸಮರ್ಪಕ ಭಂಗಿ, ಬೆನ್ನಿಗೆ ಹೆಚ್ಚುವರಿ ಆಯಾಸವುಂಟು ಮಾಡುವ ಕೆಲವು ರೀತಿಯ ಅಸಹಜ ಚಟುವಟಿಕೆಗಳು, ಧೂಮಪಾನ ಹಾಗೂ ಬೆನ್ನಿನ ಮೇಲೆ ಹಠಾತ್ ಒತ್ತಡ ಹೇರುವುದು, ನಿರಂತರ ದಣಿವನ್ನುಂಟುಮಾಡುವ ಚಟುವಟಿಕೆಗಳು ಇತ್ಯಾದಿ.

ಡಿಸ್ಕ್ ಜಾರುವಿಕೆಯ ತಪಾಸಣೆ ರೋಗಿಯ ಆರೋಗ್ಯ ಹಿನ್ನೆಲೆ ಹಾಗೂ ಬೆನ್ನು ಮೂಳೆಯೂ ವಿವರವಾದ ದೈಹಿಕ ಪರೀಕ್ಷೆಗಳ ಮೂಲಕ ವೈದ್ಯರು ಬೆನ್ನಿನ ಮೂಳೆಯ ಡಿಸ್ಕ್ ಜಾರಿರುವ ಬಗ್ಗೆ ತಪಾಸಣೆ ನಡೆಸುತ್ತಾರೆ. ಡಿಸ್ಕ್ ಜಾರಿರುವುದನ್ನು ಖಚಿತ ಪಡಿಸಿಕೊಳ್ಳಲು ಬೆನ್ನು ಮೂಳೆಯ ಎಕ್ಸ್-ರೇ, MRಐ ತೆಗೆದುಕೊಳ್ಳುವುದು ಆವಶ್ಯಕ. ಕೆಲವು ಪ್ರಕರಣಗಳಲ್ಲಿ ನರ್ವ್ಕಂಡಕ್ಷನ್ಟೆಸ್ಟ್, ಇಖ ಸ್ಕ್ಯಾನ್ ಇತ್ಯಾದಿ ಪರೀಕ್ಷೆಗಳನ್ನು ಮಾಡಬೇಕಾಗಬಹುದು.

ಶಸ್ತ್ರಚಿಕಿತ್ಸೆ ರಹಿತ ಅಥವಾ ಸಂರಕ್ಷಕ ಚಿಕಿತ್ಸೆ ಕೆಲವು ಸರಳ ಉಪಾಯಗಳನ್ನು ಕೈಗೊಳ್ಳುವ ಮೂಲಕ ಅನೇಕ ರೀತಿಯ ಬೆನ್ನು ನೋವುಗಳನ್ನು ಪರಿಣಾಮಕಾರಿಯಾಗಿ ನಿವಾರಿಸಿಕೊಳ್ಳಬಹುದು. ಕೆಳಬೆನ್ನು ನೋವು ಇರುವ ಸುಮಾರು 90% ಕ್ಕಿಂತಲೂ ಹೆಚ್ಚಿನ ಜನರು 3 ತಿಂಗಳೊಳಗೆ ಚೇತರಿಸಿಕೊಳ್ಳಬಲ್ಲರು. ಸಂರಕ್ಷಕ ಚಿಕಿತ್ಸೆ ಅಂದರೆ, ಮೊಣಗಂಟಿನ ಕೆಳಗೆ ಸಣ್ಣ ದಿಂಬನ್ನು ಇರಿಸಿಕೊಂಡು 1 ಅಥವಾ 2 ದಿನ ವಿಶ್ರಾಂತಿ ತೆಗೆದುಕೊಳ್ಳುವುದು. ಟ್ರಾಕ್ಷನ್ ಸಹಿತ ಅಥವಾ ರಹಿತವಾಗಿ ಈ ಕ್ರಮವನ್ನು ಅನುಸರಿಸಬಹುದು. ದೀರ್ಘಕಾಲಿಕ ವಿಶ್ರಾಂತಿಯಿಂದ ವ್ಯಕ್ತಿಗೆ ಇನ್ನಷ್ಟು ಹಾನಿಯಾಗುವ ಸಾಧ್ಯತೆಗಳಿರುವ ಕಾರಣ ದೀರ್ಘಕಾಲಿಕ ವಿಶ್ರಾಂತಿಯನ್ನು ಸೂಚಿಸುವುದಿಲ್ಲ.ನೋವು ನಿವಾರಕ ಉರಿಯೂತ ನಿರೋಧಕ ಔಷಧಿಗಳು ಹಾಗೂ ಸ್ನಾಯು ವಿಶ್ರಾಂತಿದಾಯಕ ಔಷಧಿಗಳಿಂದ ಸಹಾಯವಾಗಬಹುದು.ನರಗಳ ಕಾರಣದ ರೋಗ ಲಕ್ಷಣಗಳಾಗಿದ್ದರೆ ವಿವಿಧ ರೀತಿಯ ನ್ಯೂರೋಟ್ರೋಪಿಕ್ ಔಷಧಿಗಳನ್ನು ತೆಗೆದುಕೊಳ್ಳಬಹುದು.

ಒಂದು ಸಲ ತೀವ್ರ ನೋವು ಬಂದು ಹೋದ ಬಳಿಕ, ಸ್ನಾಯುಗಳ ಪುನ:ಶ್ಚೇತನ ಹಾಗೂ ಸ್ನಾಯುಗಳಿಗೆ ಸಾಮರ್ಥ್ಯವನ್ನೀಯುವ ವ್ಯಾಯಾಮಗಳನ್ನು ಮಾಡುವುದರಿಂದ ಬೆನ್ನಿಗೆ ಬಹಳ ಹಿತವಾದ ಪರಿಣಾಮ ಉಂಟಾಗುತ್ತದೆ.

ಕೆಲವು ಪ್ರಕರಣಗಳಿಗೆ ಬೆನ್ನು ಮೂಳೆಯ ಇಂಜೆಕ್ಷನ್ ಅನ್ನೂ ಸಹ ಉಪಯೋಗಿಸಬಹುದು.ಯಾವುದೇ ರೀತಿಯ ದೈಹಿಕ ಚಟುವಟಿಕೆಗಳನ್ನು ಅಂದರೆ ವಿಶೇಷವಾಗಿ ಮುಂದಕ್ಕೆ ಬಾಗುವುದು, ಭಾರ ಎತ್ತುವುದು ಇತ್ಯಾದಿ ಚಟುವಟಿಕೆಗಳು ಆದಷ್ಟು ಮಿತಿಯಲ್ಲಿರಲಿ. ಈ ಕ್ರಮವನ್ನು ಪಾಲಿಸುವುದರಿಂದ ಬೆನ್ನು ನೋವಿನ ಲಕ್ಷಣಗಳು ಮರುಕಳಿಸುವುದಿಲ್ಲ ಅನ್ನುವುದು ಖಚಿತವಾಗುತ್ತದೆ. ಒಂದು ಸಣ್ಣ ನಡಿಗೆ ಹಾಗೂ ಬಹಳ ಹೊತ್ತು ಕುಳಿತಿರುವುದನ್ನು ತಪ್ಪಿಸಿಕೊಳ್ಳುವುದರಿಂದ ಹಿತವೆನಿಸಬಹುದು. ಕುಳಿತುಕೊಳ್ಳುವ ಹಾಗೂ ನಿಲ್ಲುವ ಸರಿಯಾದ ಭಂಗಿಯ ಬಗ್ಗೆ ಅರಿವಿರಬೇಕಾದುದು ಬಹಳ ಆವಶ್ಯಕ. ದೈನಂದಿನ ಚಟುವಟಿಕೆಗಳನ್ನು ಮಾಡುವಾಗ ಮುನ್ನೆಚ್ಚರಿಕೆ ವಹಿಸಿಕೊಳ್ಳಿ. ದೇಹದ ತೂಕ ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ, ಧೂಮಪಾನದಿಂದ ದೂರವಿರಿ. ಈ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಮುಂದಕ್ಕೆ ಬೆನ್ನು ನೋವಿನಿಂದ ಬಳಲುವುದನ್ನು ತಪ್ಪಿಸಿಕೊಳ್ಳಬಹುದು.

ಶಸ್ತ್ರಚಿಕಿತ್ಸೆ ಶಸ್ತ್ರಚಿಕಿತ್ಸೆ ರಹಿತ ಚಿಕಿತ್ಸೆಯಿಂದ ವ್ಯಕ್ತಿಗೆ ಯಾವ ಪ್ರಯೋಜನವೂ ಆಗದಿದ್ದರೆ, ಬೆನ್ನು ನೋವಿನ ಲಕ್ಷಣಗಳು ಕಡಿಮೆಯಾಗದಿದ್ದರೆ, ಆಗ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದು ಆವಶ್ಯಕ. ಮುಂದಿನ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಮೊದಲು ವ್ಯಕ್ತಿಗೆ ಬೆನ್ನುಮೂಳೆಯ ಸೋಂಕು ಅಥವಾ ಗಡ್ಡೆಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದುವೇಳೆ ವ್ಯಕ್ತಿಗೆ ನಿರಂತರ ಕಾಲು ನೋವಿದ್ದು, ಸಂರಕ್ಷಕ ಚಿಕಿತ್ಸೆಯಿಂದಲೂ ಉಪಶಮನವಾಗದಿದ್ದರೆ, ಆಗ ಒಂದಾವರ್ತಿ ಎಪಿಡ್ನೂರಲ್ ಸ್ಟಿರಾಯ್ಡ ಅಥವಾ ನರ್ವ್ ರೂಟ್ ಇಂಜೆಕ್ಷನ್ ತೆಗೆದುಕೊಳ್ಳಬಹುದು.

ಶಸ್ತ್ರಚಿಕಿತ್ಸೆ ಬೇಕೆನ್ನಿಸಲು ಕೆಲವು ಸೂಚನೆಗಳು ಅಂದರೆ ಆಗಾಗ ಮರುಕಳಿಸುವ ಕಾಲು ನೋವು, ಕಾಲು ಪಾದಗಳು ಜಡವಾಗುವುದು ಅಥವಾ ನಿಶ್ಶಕ್ತಿ.ಇಡಿಯ ಆವರ್ತದ ಸಂರಕ್ಷಕ ಚಿಕಿತ್ಸೆಗೆ ರೋಗಲಕ್ಷಣಗಳು ಯಾವುದೇ ರೀತಿಯಲ್ಲಿ ಸ್ಪಂದಿಸದಿರುವುದು.
ಸಂರಕ್ಷಕ ಚಿಕಿತ್ಸೆಯಿಂದ ವ್ಯಕ್ತಿಯ ನೋವು, ಜಡವಾಗುವುದು ಅಥವಾ ನಿಶ್ಶಕ್ತಿ ಹೆಚ್ಚಾಗುವುದು.ಕ್ವಾಡಾ ಎಕ್ವಿನ ಸಿಂಡ್ರೋಮ್ ಸಂದರ್ಭದಲ್ಲಿ ವಿಸರ್ಜನಾಂಗಗಳ ಮೆಲಿನ ನಿಯಂತ್ರಣ ಕುಸಿಯುವುದು.

ಈ ಯಾವುದೇ ರೀತಿಯ ಲಕ್ಷಣಗಳು ಇದ್ದಾಗ ಹಾಗೂ ಎಂ ಆರ್ ಐಯಲ್ಲಿ ಹೊರ ಜಾರಿರುವ ಡಿಸ್ಕಿನ ಅಂಶ ಇದ್ದು ಅದು ನರಗಳ ಸಂಕುಚನಕ್ಕೆ ಕಾರಣವಾಗಿದ್ದರೆ, ಆಗ ಶಸ್ತ್ರ ಚಿಕಿತ್ಸೆಯನ್ನು ಸೂಚಿಸಬಹುದು. ಡಿಸ್ಕಿನ ಗಾತ್ರ ಹಾಗೂ ಯಾವ ಭಾಗದಲ್ಲಿ ಡಿಸ್ಕ್ ಜಾರಿದೆ ಎಂಬುದನ್ನು ಆಧರಿಸಿಕೊಂಡು ಮೈಕ್ರೋಡಿಸೆಕ್ಟಮಿ ಅಥವಾ ಕನ್ವೆನ್ಶನಲ್ ಡಿಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಆರಿಸಿಕೊಳ್ಳಬಹುದು. ಪ್ರಸ್ತುತ ಇಂತಹ ಸಮಸ್ಯೆಗಳ ನಿವಾರಣೆಗಾಗಿ ಜಗತ್ತಿನಾದ್ಯಂತ ಅತ್ಯಂತ ಸರಳ ಶಸ್ತ್ರ ಚಿಕಿತ್ಸಾ ತಂತ್ರಗಳು ಲಭ್ಯ ಇವೆ. ಇವುಗಳಿಂದಾಗಿ ಶಸ್ತ್ರಚಿಕಿತ್ಸಾ ಅನಂತರದ ತೊಂದರೆ ಕಡಿಮೆ ಇದ್ದು, ಕಡಿಮೆ ಅವಧಿ ಆಸ್ಪತ್ರೆಯಲ್ಲಿ ಉಳಿದು ಆದಷ್ಟು ಬೇಗನೆ ನಮ್ಮ ಕೆಲಸ ಕಾರ್ಯಗಳಿಗೆ ಮರಳಬಹುದು.

ಮತ್ತೆ ಬೆನ್ನುಮೂಳೆಯ ಡಿಸ್ಕ್ ಜಾರದಂತೆ ತಡೆಯಬಹುದಾದ ಮುನ್ನೆಚ್ಚರಿಕೆಗಳು ಮತ್ತೆ ಬೆನ್ನುಮೂಳೆಯ ಡಿಸ್ಕ್ ಜಾರದಂತೆ ತಡೆಯಬಹುದಾದ ಒಳ್ಳೆಯ ಉಪಾಯ ಎಂದರೆ ಚಟುವಟಿಕೆಯಿಂದ ಇರುವುದು ಹಾಗೂ ನಿತ್ಯವೂ ತಪ್ಪದೆ ವ್ಯಾಯಾಮ ಮಾಡುವುದು. ವ್ಯಾಯಾಮ ಅಂದರೆ ನಮಗೆ ಸಹಜ ಕ್ಷಮತೆಯನ್ನು ಒದಗಿಸುವ ನಡಿಗೆ, ಸೈಕ್ಲಿಂಗ್, ಈಜು ಇತ್ಯಾದಿ. ನಮ್ಮನ್ನು ನಾವು ಸಹಜವಾಗಿ, ಸರಳವಾಗಿ ಕ್ರೀಯಾಶೀಲರನ್ನಾಗಿ ಇರಿಸಿಕೊಳ್ಳುವ ವ್ಯಾಯಾಮಕ್ಕಿಂತಲೂ, ಬೆನ್ನಿಗೆ ಶಕ್ತಿಯನ್ನು ಕೊಡುವ ಬೇರೆ ವ್ಯಾಯಾಮಗಳ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ.ಜೀವನ ಶೈಲಿಯಲ್ಲಿನ ಒಂದು ಸಣ್ಣ ಬದಲಾವಣೆ,

ಸಮಸ್ಯೆಯ ಬಗೆಗಿನ ಸರಿಯಾದ ಅರಿವು ಇವುಗಳ ಹೊರತಾಗಿ ಬೆನ್ನು ನೋವಿನ ತಡೆಯುವಿಕೆಯಲ್ಲಿ ಯಾವುದೂ ಹೆಚ್ಚು ಪ್ರಯೋಜನಕ್ಕೆ ಬಾರದು.

Comments are closed.