ರಾಷ್ಟ್ರೀಯ

ಪಾಕ್ ಆಕ್ರಮಿತ ಕಾಶ್ಮೀರ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗ: ಪ್ರಧಾನಿ ಮೋದಿ

Pinterest LinkedIn Tumblr

kashmir-voilenceನವದೆಹಲಿ: ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಕರೆಯಲಾಗಿದ್ದು, ಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅವಿಭಾಜ್ಯ ಅಂಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜಧಾನಿ ನವದೆಹಲಿಯ ಸಂಸತ್ ಭವನದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಯೊಬ್ಬ ಭಾರತೀಯನಂತೆ ನಾನೂ ಕೂಡಾ ಕಾಶ್ಮೀರದಲ್ಲಿ ಶಾಂತಿ ನೆಲೆಸಲೆಂದು ಬಯಸುತ್ತೇನೆ. ಕಣಿವೆ ರಾಜ್ಯದ ಇತ್ತೀಚಿನ ಬೆಳವಣಿಗೆಗಳಿಂದಾಗಿ ನಿಜಕ್ಕೂ ತುಂಬಾ ನೋವಾಗಿದೆ. ಕಾಶ್ಮೀರದ ಪ್ರತಿಯೊಬ್ಬ ಪ್ರಜೆಯೂ ಶಾಂತಿ ನೆಲೆಸಬೇಕು ಎಂದು ಪ್ರಾರ್ಥಿಸುತ್ತಾನೆ. ಅಂತೆಯೇ ಪ್ರಜಾಪ್ರಭುತ್ವದ ಮೇಲೆ ಭರವಸೆಯನ್ನಿರಿಸಿಕೊಂಡಿದ್ದಾನೆ. ಹೀಗಾಗಿ ಸರ್ಕಾರ ರಕ್ಷಣೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಿಸಿರುವ ಕಾಶ್ಮೀರ ಜನತೆ ಪ್ರತ್ಯೇಕತಾವಾದಿಗಳು ಮತ್ತು ಉಗ್ರ ಸಂಘಟನೆಗಳ ಬೆದರಿಕೆಗಳು ನಡುವೆಯೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನಂಬಿಕೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಾವು ಕರ್ತವ್ಯ ನಿರ್ವಹಿಸಬೇಕಿದೆ. ಕಾಶ್ಮೀರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಸಿದ್ಧವಿದ್ದು, ಶಾಂತಿಯುತ ಮತ್ತು ಸ್ಥಿರ ಆಡಳಿತಕ್ಕೆ ಆದ್ಯತೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪಾಕ್ ಆಕ್ರಮಿತ ಕಾಶ್ಮೀರ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗ, ಬಲೂಚಿಸ್ತಾನ ಹಿಂಸಾಚಾರಕ್ಕೆ ಪಾಕ್ ಉತ್ತರ ನೀಡಬೇಕು

ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಬಲೂಚಿಸ್ತಾನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ವಿಶ್ವ ಸಮುದಾಯಕ್ಕೆ ಉತ್ತರ ನೀಡಲೇ ಬೇಕು ಎಂದು ಆಗ್ರಹಿಸಿದರು. ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರದ ಮೊದಲ ಆಧ್ಯತೆಯಾಗಿದೆ. ಕಾಶ್ಮೀರದ ಜನತೆಯೊಂದಿಗೆ ತಾವಿದ್ದು, ಜನತೆಯ ವಿಶ್ವಾಸ ಗಳಿಸಬೇಕಿದೆ ಎಂದು ಹೇಳಿದ್ದಾರೆ. ಸಭೆಯಲ್ಲಿ ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿ ಹತ್ಯೆ ಸಮರ್ಥಿಸಿಕೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ರಕ್ಷಣೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ ಅದರ ಜತೆಜತೆಗೇ ಕಣಿವೆ ರಾಜ್ಯದ ಜನರ ವಿಶ್ವಾಸ ಸಂಪಾದಿಸಬೇಕಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ಗಲಭೆ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಿ, ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಎಲ್ಲ ಪಕ್ಷಗಳಿಗೂ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದು, ಶೀಘ್ರದಲ್ಲೇ ಗಲಭೆ ಪೀಡಿತ ಕಾಶ್ಮೀರ ಶಾಂತವಾಗಲಿದೆ ಎಂದು ಹೇಳಿದ್ದಾರೆ.

ಇನ್ನು ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಗುಲಾಂನಭಿ ಆಜಾದ್, ಸಿಪಿಐ ಮುಖಂಡ ಸಿತಾರಾಮ್ ಯೆಚೂರಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜನಾಥ್ ಸಿಂಗ್ ಅವರು, ಬಲೂಚಿಸ್ತಾನ ಹಿಂಸಾಚಾರ ಸಂಬಂಧ ವಿಶ್ವಸಮುದಾಯಕ್ಕೆ ಪಾಕಿಸ್ತಾನ ಉತ್ತರ ನೀಡಲಬೇಕು ಎಂದು ಪ್ರಧಾನಿ ಆಗ್ರಹಿಸಿದರು ಎಂದು ತಿಳಿಸಿದರು.

Comments are closed.