ಕರ್ನಾಟಕ

ಪಾಲಿಕೆ ಸದಸ್ಯನಿಗೆ ಕೊಲೆ ಬೆದರಿಕೆ- ಆರೋಪಿ ಬಂಧನ

Pinterest LinkedIn Tumblr

BBMP-1ಬೆಂಗಳೂರು, ಆ ೮- ಇತ್ತೀಚೆಗೆ ಬಾಪೂಜಿನಗರದ ಕಾಂಗ್ರೆಸ್ ಪಾಲಿಕೆ ಸದಸ್ಯ ಅಜ್ಮಲ್ ಬೇಗ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೋಲಿಸರು ಬಂಧಿಸಿದ್ದಾರೆ.

ನಗರದ ಇಮ್ದಾದ್ ಖಾನ್(೨೨) ಬಂಧಿತ ಆರೋಪಿ. ಕಳೆದ ವಾರ ಅನಾಮಿಕ ಮೊಬೈಲ್ ಸಂಖ್ಯೆಯಿಂದ ಅನೇಕ ಬಾರಿ ಕರೆ ಮಾಡಿ ಹಾಗೂ ಸಂದೇಶ ರವಾನಿಸುವ ಮೂಲಕ ಪಾಲಿಕೆ ಸದಸ್ಯ ಅಜ್ಮಲ್ ಬೇಗ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಇಮ್ದಾದ್ ಖಾನ್‌ನ್ನು ಪೋಲಿಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತ ಆರೋಪಿ ಬಾಪೂಜಿನಗರ ವಾರ್ಡ್‌ನಲ್ಲಿ ಸ್ಥಳೀಯ ನಾಗರಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದ ಪರಿಣಾಮ ಪಾಲಿಕೆ ಸದಸ್ಯ ಅಜ್ಮಲ್ ಬೇಗ್ ಅವರು ಸ್ವತಃ ಪೋಲಿಸರ ವಶಕ್ಕೆ ಒಪ್ಪಿಸಿದ್ದರು, ಆ ದ್ವೇಷಕ್ಕೆ ಆರೋಪಿ ಈ ರೀತಿ ಕೊಲೆ ಬೆದರಿಕೆ ಹಾಕಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ. ಎರಡು- ಮೂರು ದಿನಗಳ ಕಾಲ ನಿರಂತರವಾಗಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪಿ ಮೊಬೈಲ್‌ನ ಕರೆಗಳ ಬಗ್ಗೆ ಪರಿಶೀಲನೆ ನಡೆಸಿರುವ ಪೋಲಿಸರು ಇತರೆ ಮಾಹಿತಿ ಕಲೆ ಹಾಕಲು ತನಿಖೆ ಮುಂದುವರೆಸಿದ್ದಾರೆ.

ಪ್ರಕರಣದ ಬಳಿಕ ಜಂಟಿ ಪೋಲಿಸ್ ಆಯುಕ್ತ ಚರಣ್ ರೆಡ್ಡಿ, ಎಸಿಪಿ ಸತ್ಯನಾರಾಯಣ ಹಾಗೂ ಸರಕಾರ ಅಜ್ಮಲ್ ಬೇಗ್ ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲು ಸೂಚಿಸಿದೆ. ಕಳೆದ ವಾರ ಮೊಬೈಲ್‌ಗೆ ಕರೆ ಮಾಡಿದ ಆರೋಪಿ “ನಿನ್ನ ಇನ್ನು ಒಂದು ತಿಂಗಳಿನಲ್ಲಿ ಕೊಲೆ ಮಾಡುತ್ತೇನೆ” ಎಂದು ಅಜ್ಮಲ್ ಬೇಗ್‌ಗೆ ಬೆದರಿಕೆ ಹಾಕಿದ್ದನು. ಆ ಬಳಿಕ ಅವರು ಬ್ಯಾಟರಾಯನಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Comments are closed.