ಪಟನಾ: ಉದ್ಯೋಗದಲ್ಲಿ ಬಡ್ತಿ ಸಿಕ್ಕರೆ ಎಲ್ಲರೂ ಸಂತೋಷಗೊಳ್ಳುತ್ತಾರೆ. ಆದರೆ ಬಿಹಾರ ದಲ್ಲಿ ಪರಿಸ್ಥಿತಿ ಉಲ್ಟಾ ಆಗಿದೆ. ಇಲ್ಲಿನ ಪೊಲೀಸ್ ಇಲಾಖೆಯಲ್ಲಿ ಬಡ್ತಿ ನೀಡಿದರೂ ಸಿಬ್ಬಂದಿ ಅದನ್ನು ತಿರಸ್ಕರಿಸುತ್ತಿದ್ದಾರೆ! ಬಿಹಾರದಲ್ಲಿ ಜಾರಿಯಲ್ಲಿರುವ ಮದ್ಯ ನಿರ್ಬಂಧ ಕುರಿತ ಕಠಿಣ ಕಾನೂನು ಇದಕ್ಕೆ ಕಾರಣ.
ನಿರ್ಬಂಧ ನಡುವೆಯೂ ಮದ್ಯ ಮಾರಾಟ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ಕರ್ತವ್ಯಲೋಪದ ಮೇಲೆ 11 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು 10 ವರ್ಷ ಕಾಲ ಸೇವೆಯಿಂದ ಅಮಾನತು ಮಾಡಲಾಗಿದೆ. ಹೀಗಾಗಿ ಠಾಣೆಯ ಉಸ್ತುವಾರಿ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರಂತೆ. ಈಗಾಗಲೇ ಅಮಾನತು ಗೊಂಡಿರುವ ಅಧಿಕಾರಿಗಳ ಜಾಗಕ್ಕೆ ಮತ್ತು ಇತರ ಪ್ರದೇಶಗಳಿಗೆ ಈಗಿರುವ ಕಿರಿಯ ಅಧಿಕಾರಿ ಗಳಿಗೆ ಬಡ್ತಿ ನೀಡಿ ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಕಠಿಣ ಕ್ರಮಕ್ಕೆ ಹೆದರಿರುವ ಸಿಬ್ಬಂದಿ ಬಡ್ತಿ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ಇದರಿಂದ ಇಲಾಖೆಗೆ ಸಮಸ್ಯೆಯಾಗಿದೆ. ಬಿಹಾರದಲ್ಲಿ ಜಾರಿಯಲ್ಲಿರುವ ಮದ್ಯ ನಿಷೇಧ ಕಾನೂನು ಪ್ರಕಾರ, ಯಾವ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತದೆಯೋ, ಆಯಾ ಠಾಣೆಯ ಅಧಿಕಾರಿ ಇದಕ್ಕೆ ಹೊಣೆಗಾರ ಆಗಿರುತ್ತಾನೆ.
ನಿತೀಶ್ ಎಚ್ಚರಿಕೆ: ಬಡ್ತಿ ಪಡೆದುಕೊಳ್ಳಲು ಮುಂದೆ ಬರದ ಪೊಲೀಸ್ ಸಿಬ್ಬಂದಿಗೆ ಸಿಎಂ ನಿತೀಶ್ ಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ‘ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಮನೆಗೆ ಹೋಗಿ. ಕಾನೂನಿನ ಎದುರು ಯಾರೂ ದೊಡ್ಡವರಲ್ಲ’ ಎಂದಿದ್ದಾರೆ.
Comments are closed.