ಗೋಬಿ(ಚೀನಾ): ನೀವೇನೇ ಹೇಳಿ. ನಾಯಿ ನಿಯತ್ತಿನ ಪ್ರಾಣಿ. ತನಗೆ ಆಹಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಸ್ವಾಮಿನಿಷ್ಠೆಯ ಜೀವಿ ಶ್ವಾನ. ಇದಕ್ಕೊಂದು ತಾಜಾ ಉದಾಹರಣೆ ಚೀನಾದ ಗೋಬಿ ಮರುಭೂಮಿಯಲ್ಲಿ ನಡೆದಿದೆ.
ಆಸ್ಟ್ರೇಲಿಯಾ ಓಟಗಾರನೊಬ್ಬ ತೋರಿದ ಪ್ರೀತಿ-ಅಕ್ಕರೆಯಿಂದಾಗಿ 125 ಕಿಲೋಮೀಟರ್‍ಗಳ ದೂರ ಆತನನ್ನು ಹಿಂಬಾಲಿಸಿದ ಪುಟ್ಟ ಬೀದಿ ನಾಯಿಯೊಂದು ಸ್ವಾಮಿ ನಿಷ್ಠೆ ಪ್ರದರ್ಶಿಸಿದೆ. ತನ್ನೊಂದಿಗೆ ಮರುಭೂಮಿಯಲ್ಲಿ ಇಷ್ಟು ದೂರ ಓಡಿದ ಈ ನಾಯಿಗೆ ಆತ ವಿಶೇಷ ದತ್ತು ಪುರಸ್ಕಾರ ನೀಡಿದ್ದಾನೆ.
ಆಸ್ಟ್ರೇಲಿಯಾದ ಶ್ರೀಮಂತ ಹಾಗೂ ಎಕ್ಸ್‍ಟ್ರೀಮ್ ರನ್ನರ್ ಡಯನ್ ಲಿಯೋನಾರ್ಡ್ ಮತ್ತು ಆತನ ತಂಡವು ಚೀನಾದ ಪಶ್ಚಿಮ ಭಾಗದಲ್ಲಿರುವ ಯುಐಗುರ್ ಪ್ರಾಂತ್ಯದ ದುರ್ಗಮ ಪರ್ವತಗಳು ಮತ್ತು ಕೆಂಡದಂಥ ಗೋಬಿ ಮರುಭೂಮಿಯಲ್ಲಿ ಕಳೆದ ತಿಂಗಳು 250 ಕಿಲೋಮೀಟರ್‍ಗಳ ಓಟ ಅಭಿಯಾನ ಕೈಗೊಂಡಿತ್ತು.
ಟಿಯಾನ್ ಶಾನ್ ರೇಂಜ್ ಎಂಬ ಪ್ರದೇಶದಲ್ಲಿ ಪುಟ್ಟ ಬೀದಿ ನಾಯಿಯೊಂದಕ್ಕೆ ಈತ ಆಹಾರ ನೀಡಿ ಉಪಚರಿಸಿದ. ನಂತರ ಸುಡು ಬಿಸಿಲಿನಲ್ಲಿ, ಕುದಿಯುತ್ತಿದ್ದ ಗೋಬಿ ಮರುಭೂಮಿಯಲ್ಲಿ ಸುಮಾರು 125 ಕಿಲೋಮೀಟರ್‍ಗಳ ದೂರ ಈ ನಾಯಿ ಲಿಯೋನಾರ್ಡ್‍ನನ್ನು ಹಿಂಬಾಲಿಸಿತು. ಆತನೊಂದಿಗೆ ಓಟದಲ್ಲಿ ಜೊತೆಯಾಗಿ ಸ್ವಾಮಿ ನಿಷ್ಠೆ ಪ್ರದರ್ಶಿಸಿತು. ಏಳು ರೇಸ್‍ಗಳಲ್ಲಿ ಹಾಗೂ ಬಹು ಹಂತದ ಕಠಿಣ ಓಟಗಳಲ್ಲಿ ಭಾಗವಹಿಸಿರುವ ಲಿಯೋನಾರ್ಡ್‍ಗೆ ಇದು ಹೊಸ ಅನುಭವ. ಶ್ವಾನದ ಸ್ವಾಮಿ ನಿಷ್ಠೆ ಮತ್ತು ಕಷ್ಟ ಸಹಿಷ್ಣುತೆ ಆತನಲ್ಲಿ ಬೆರಗು ಮೂಡಿಸಿತು. ಗೋಬಿ ಮರುಭೂಮಿಯಲ್ಲಿ ತನಗೆ ಜೊತೆಯಾದ ಈ ನಾಯಿಗೆ ಈತ ಗೋಬಿ ಎಂದು ಹೆಸರಿಟ್ಟಿದ್ದಾನೆ. ಅಲ್ಲದೇ ಗೋಬಿಯನ್ನು ದತ್ತು ಪಡೆದು ವಿಶೇಷ ಪುರಸ್ಕಾರ ನೀಡಿದ್ದಾನೆ. ಮರುಭೂಮಿಯಲ್ಲಿ ಓಡಿ ಬೆಂದು ಬಸವಳಿದಿರುವ ಈ ಶ್ವಾನಕ್ಕೆ ಚೀನಾದಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಶ್ವಾನವನ್ನು ತನ್ನೊಂದಿಗೆ ಕರೆದೊಯ್ಯಲು ಆತನ ನಿರ್ಧರಿಸಿದ್ದಾನೆ. ಗೋಬಿ ಹೆಸರಿನಲ್ಲಿ ನಿಧಿ ಸಂಗ್ರಹಿಸಿ ಆ ಮೂಲಕ ಇಂಥ ಶ್ವಾನಗಳಿಗೆ ನೆರವಾಗುವುದು ಲಿಯೋನಾರ್ಡ್ ಉದ್ದೇಶವಾಗಿದೆ. ಶ್ವಾನ ಮತ್ತು ಮಾನವನ ನಿಷ್ಕಲ್ಮಶ ಬಾಂಧವ್ಯಕ್ಕೆ ಇದೊಂದು ಸ್ಪಷ್ಟ ನಿದರ್ಶನ.
Comments are closed.